ಬ್ರಿಜ್ಟೌನ್ (ವೆಸ್ಟ್ ಇಂಡೀಸ್): ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಸೂಪರ್ 8 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡ ಆಫಘಾನಿಸ್ತಾನ ತಂಡದ ವಿರುದ್ಧ ಸುಲಭ ವಿಜಯ ತನ್ನದಾಗಿಸಿಕೊಂಡಿತು.
ಸೂರ್ಯಕುಮಾರ್ ಯಾದವ್ (53 ರನ್, 28 ಎಸೆತ, 5 ಫೊರ್, 3 ಸಿಕ್ಸರ್) ಹಾಗೂ ಜಸ್ಪ್ರಿತ್ ಬುಮ್ರಾ (3 ವಿಕೆಟ್, 4 ಓವರ್, 7 ರನ್) ಬಾರತ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಭಾರತ ತಂಡ ಸೂಪರ್ 8 ಹಂತದ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 181 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 134 ರನ್ ಬಾರಿಸಿ ಆಲ್ಔಟ್ ಆಗಿ 47 ರನ್ಗಳ ಸೋಲಿಗೆ ಒಳಗಾಯಿತು.