ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್ನಲ್ಲಿ (ಕೆಎಸ್‌ಬಿಎ) ಇದೇ ಮೊದಲ ಬಾರಿಗೆ ಬಾರಿಗೆ ಜಾಯ್ ಡಬ್ಲ್ಯೂಪಿಎ ವಿಶ್ವ ಜೂನಿಯರ್ ಹೇಬಾಲ್ ಚಾಂಪಿಯನ್‌ಷಿಪ್-2024 ಆಯೋಜಿಸಲಾಗಿದೆ. ಈ ಚಾಂಪಿಯನ್‌ಷಿಪ್ ಮಂಗಳವಾರ ಉದ್ಘಾಟನೆಗೊಂಡಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಹೇಬಾಲ್ ಕ್ರೀಡಾ ಸ್ಪರ್ಧೆ ಇದಾಗಿದ್ದು, ಈ ಚಾಂಪಿಯನ್‌ಷಿಪ್ ನಲ್ಲಿ 25ಕ್ಕೂ ಹೆಚ್ಚು ದೇಶಗಳ 53 19 ವಯೋಮಿತಿ ಆಟಗಾರರು ಪಾಲ್ಗೊಂಡಿದ್ದಾರೆ. ಇದರಲ್ಲಿ 4 ಮಂದಿ ಭಾರತೀಯ ಆಟಗಾರರು ಕೂಡ ಇರುವುದು ವಿಶೇಷ.
40 ಮಂದಿ ಬಾಲಕರು, 13 ಬಾಲಕಿಯರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಬಾಲಕರ ಜೂನಿಯರ್ ವಿಭಾಗದಲ್ಲಿ ಮಯಾಂಕ್ ಕಾರ್ತಿಕ್ (ಕರ್ನಾಟಕ), ಲಕ್ಷ್ಮೀನಾರಾಯಣನ್ (ತಮಿಳುನಾಡು) ಸ್ಪರ್ಧಿಸುತ್ತಿದ್ದಾರೆ. ಬಾಲಕಿಯರ ಜೂನಿಯರ್ ವಿಭಾಗದಲ್ಲಿ ನತಾಶಾ ಚೇತನ್ (ಕರ್ನಾಟಕ), ಶ್ರುತಿ ಎಲ್ (ತಮಿಳುನಾಡು) ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಗಣ್ಯರು, ಆಟಗಾರರು ಮತ್ತು ಕ್ರೀಡೋತ್ಸಾಹಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹೇಬಾಲ್ ಭಾರತದ ಬ್ರಾಂಡ್ ಅಂಬಾಸಿಡರ್ ಪ್ರಣೀತ್ ರಾಮ್ ಚಂದಾನಿ ಅವರು, "ಈ ಹೇಬಾಲ್ ಚಾಂಪಿಯನ್‌ಷಿಪ್ ಜಗತ್ತಿನಾದ್ಯಂತ ಇರುವ ತರುಣ, ತರುಣಿಯರ ಉತ್ಸಾಹದ ಸಂಕೇತವಾಗಿದೆ" ಎಂದು ಹೇಳಿದರು.
ವರ್ಲ್ಡ್ ಪೂಲ್-ಬಿಲಿಯರ್ಡ್ ಅಸೋಸಿಯೇಷನ್ (ಡಬ್ಲ್ಯೂಪಿಎ)ನ ಪ್ರಧಾನ ಕಾರ್ಯದರ್ಶಿ ಕರ್ಟ್ ಜೋರ್ಗೆನ್ ಸ್ಯಾಂಡ್‌ಮನ್, ಕರ್ನಾಟಕದ ಖ್ಯಾತ ಸ್ನೂಕರ್ ಆಟಗಾರ ಐ.ಎಚ್. ಮನುದೇವ್, ಭಾರತದ ವಿಶ್ವ ಬಿಲಿಯರ್ಡ್ ಚಾಂಪಿಯನ್ ಭಾಸ್ಕರ್, ಭಾರತೀಯ ಹೇಬಾಲ್ ಆಟಗಾರ ಮತ್ತು ಲಕ್ಸ್ ಬಿಲಿಯರ್ಡ್ಸ್ ನ ವ್ಯವಸ್ಥಾಪಕ ಪಾಲುದಾರ ಉಪೇಂದ್ರ ಥಾಪಾ ಸಿಂಗ್, ಕೆ.ಎಸ್.ಬಿ.ಎಯ ಸಹ-ಸಂಸ್ಥಾಪಕ ಎಂ. ಮಣಿ ಮತ್ತು ತಮಿಳುನಾಡು ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಸಿ. ಮನೋಜ್ ಇದ್ದರು.
ಇದು ಭಾರತದಲ್ಲಿ ನಡೆದ ಮೊದಲ ಹೇಬಾಲ್ ಪಂದ್ಯಾವಳಿಯಾಗಿದೆ. ಜಾಯ್ ಬಿಲಿಯರ್ಡ್ಸ್ ಎಂಬವರು ಚೈನೀಸ್ 8 ಬಾಲ್ ಆಟದಿಂದ ಪ್ರೇರಿತರಾಗಿ ಹೇಬಾಲ್ ಆಟವನ್ನು ಆರಂಭಿಸಿದರು. ಇದೀಗ ಹೇಬಾಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು, ನಾನಾ ಭಾಗಗಳಲ್ಲಿ ಹೇಬಾಲ್ ಚಾಂಪಿಯನ್‌ಷಿಪ್ ನಡೆಯುತ್ತದೆ.
ಜಾಯ್ ಡಬ್ಲ್ಯೂಪಿ ವರ್ಲ್ಡ್ ಜೂನಿಯರ್ ಹೇಬಾಲ್ ಚಾಂಪಿಯನ್‌ಷಿಪ್-2024 ಅನ್ನು ಆಸಕ್ತರು ವೀಕ್ಷಿಸಬಹುದಾಗಿದ್ದು, ಕೆಎಸ್‌ಬಿಎಗೆ ಭೇಟಿ ನೀಡಬಹುದು.