ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸತತ 4 ಗೆಲುವಿನೊಂದಿಗೆ ಪ್ಲೇಆಫ್ ಆಸೆಗೆ ಮರುಜೀವ ತುಂಬಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಅಸ್ಥಿರ ನಿರ್ವಹಣೆಯ ನಡುವೆಯೂ ಪ್ಲೇಆಫ್ ಆಸೆ ಜೀವಂತ ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-17ರಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮಾಡು ಇಲ್ಲವೆ ಮಡಿ ಎನಿಸಿದ್ದು, ಸೋತ ತಂಡ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ. ಆರ್ಸಿಬಿ ತವರಿನ ಲಾಭ ಹೊಂದಿದ್ದರೆ, ಡೆಲ್ಲಿ ತಂಡ ನಾಯಕ ರಿಷಭ್ ಪಂತ್ ಗೈರಿನ ಬಲುದೊಡ್ಡ ಹಿನ್ನಡೆ ಎದುರಿಸಿದೆ.
ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಬಹುತೇಕ ನಿರ್ಗಮನ ಬಾಗಿಲಿನತ್ತ ಸಾಗಿದ್ದ ಫಾಫ್ ಡು ಪ್ಲೆಸಿಸ್ ಪಡೆ, ನಂತರದಲ್ಲಿ ಆಡಿದ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್ಸಿಬಿ ಮತ್ತೆ ಪ್ಲೇಆಫ್ ಕನಸು ಕಾಣಲಾರಂಭಿಸಿದೆ. ಕಳೆದ 4 ಪಂದ್ಯಗಳಲ್ಲಿ ಗುಜರಾತ್ ವಿರುದ್ಧ 2 ಬಾರಿ ಗೆದ್ದಿರುವ ಆರ್ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ತಂಡಗಳನ್ನೂ ಮಣಿಸಿದೆ. ಈ 4 ಗೆಲುವು ಸಾಧಿಸಿದ ರೀತಿ ಮತ್ತು ಡೆಲ್ಲಿ ತಂಡ ಪಂತ್ ಗೈರಿನ ಹಿನ್ನಡೆ ಹೊಂದಿರುವುದನ್ನು ಗಮನಿಸಿದಾಗ ಆರ್ಸಿಬಿ ಈ ಪಂದ್ಯದಲ್ಲಿ ಫೇವರಿಟ್ ತಂಡವೆನಿಸಿದೆ.
ಡೆಲ್ಲಿ ತಂಡವೂ ಆರಂಭಿಕ 5 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿತ್ತು. ನಂತರದಲ್ಲಿ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್ ಅವಕಾಶ ವೃದ್ಧಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಡೆಲ್ಲಿ ಈ ಪಂದ್ಯ ಗೆದ್ದರೆ 4ನೇ ಸ್ಥಾನಕ್ಕೇರಲಿದೆ. ಆದರೆ ರನ್ರೇಟ್ ಮೈನಸ್ನಲ್ಲಿರುವುದರಿಂದ ಡೆಲ್ಲಿಗೆ ದೊಡ್ಡ ಅಂತರದ ಗೆಲುವು ಅಗತ್ಯವಾಗಿದೆ.
250: ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 250 ಪಂದ್ಯ ಆಡಿದ 4ನೇ ಆಟಗಾರ ಎನಿಸಲಿದ್ದಾರೆ. ಧೋನಿ (262), ರೋಹಿತ್ ಶರ್ಮ (256), ದಿನೇಶ್ ಕಾರ್ತಿಕ್ (254) ಮೊದಲ ಮೂವರು. ಕೊಹ್ಲಿ ಐಪಿಎಲ್ನಲ್ಲಿ ಒಂದೇ ತಂಡದ (ಆರ್ಸಿಬಿ) ಪರ 250 ಪಂದ್ಯ ಆಡಿದ ಮೊದಲಿಗ ಎನಿಸಲಿದ್ದಾರೆ.
ಕೊಹ್ಲಿ ರನ್ಮಳೆ ಬಲ
ಆರ್ಸಿಬಿ ತಂಡದ ಪ್ರತಿ ಗೆಲುವಿನಲ್ಲೂ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 6 ಬಾರಿ 50 ಪ್ಲಸ್ ಇನಿಂಗ್ಸ್ ಆಡಿ 634 ರನ್ ಕಲೆಹಾಕಿರುವ ಕೊಹ್ಲಿಗೆ ಪ್ಲೆಸಿಸ್, ಪಾಟೀದಾರ್, ಗ್ರೀನ್, ಕಾರ್ತಿಕ್ ಸೂಕ್ತ ಬೆಂಬಲ ಒದಗಿಸುತ್ತ ಬಂದಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಅತ್ಯಂತ ದುರ್ಬಲವಾಗಿ ಕಾಣಿಸಿದ್ದ ಆರ್ಸಿಬಿ ಬೌಲಿಂಗ್ ವಿಭಾಗ ಕಳೆದ 4 ಪಂದ್ಯಗಳಿಂದ ಬಲಿಷ್ಠವಾಗಿ ಪುನರಾಗಮನ ಕಂಡಿದೆ. ಪ್ರಮುಖವಾಗಿ ವೇಗಿ ಮೊಹಮದ್ ಸಿರಾಜ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬಳಿಕ ಬಿಗಿ ದಾಳಿ ಸಂಟಿಸುತ್ತಿದ್ದರೆ, ಸ್ಪಿನ್ನರ್ಗಳಾದ ಕರ್ಣ್ ಶರ್ಮ ಮತ್ತು ಸ್ವಪ್ನಿಲ್ ಸಿಂಗ್ ಕೂಡ ಉಪಯುಕ್ತ ವಿಕೆಟ್ ಕಬಳಿಸಿದ್ದಾರೆ. ಗ್ರೀನ್ ಆಲ್ರೌಂಡ್ ನಿರ್ವಹಣೆ ತೋರಿಸುತ್ತಿದ್ದಾರೆ.
ಮೆಕ್ಗುರ್ಕ್ ಸವಾಲು
ಪಂತ್ ಮೇಲಿನ ನಿಷೇಧ ಮತ್ತು ಡೇವಿಡ್ ವಾರ್ನರ್ ಗಾಯದ ಸಮಸ್ಯೆ ನಡುವೆ ಆರ್ಸಿಬಿ ತಂಡಕ್ಕೆ ಡೆಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಯುವ ಆರಂಭಿಕ ಜೇಕ್ ಫ್ರೇಸರ್ ಮೆಕ್ಗುರ್ಕ್ರಿಂದ ಸವಾಲು ಎದುರಾಗಲಿದೆ. ಮೆಕ್ಗುರ್ಕ್ 7 ಪಂದ್ಯಗಳಲ್ಲಿ 235.87ರ ಸ್ಟ್ರೆ$ಕ್ರೇಟ್ನಲ್ಲಿ 309 ರನ್ ಸಿಡಿಸಿದ್ದು, ಪವರ್ಪ್ಲೇನಲ್ಲಿ ಡೆಲ್ಲಿಗೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಜತೆಗೆ ಯುವ ಬ್ಯಾಟರ್ ಅಭಿಷೇಕ್ ಪೊರೆಲ್ ಬೆಂಬಲ ನೀಡುತ್ತಿದ್ದಾರೆ. ಆದರೆ ಪಂತ್ ಗೈರಿನಲ್ಲಿ ಡೆಲ್ಲಿ ಮಧ್ಯಮ ಕ್ರಮಾಂಕ ಮತ್ತಷ್ಟು ದುರ್ಬಲಗೊಂಡಿದ್ದು, ಟ್ರಿಸ್ಟಾನ್ ಸ್ಟಬ್ಸ್ ಹೆಚ್ಚಿನ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳಾದ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಬಿಗಿ ದಾಳಿ ಪ್ರದರ್ಶಿಸುತ್ತಿದ್ದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹ್ಮದ್ (14) ಮತ್ತು ಮುಕೇಶ್ ಕುಮಾರ್ (15) ಹೆಚ್ಚಿನ ವಿಕೆಟ್ ಬೇಟೆಯಾಡಿದ್ದಾರೆ.
ಮಳೆ ಭೀತಿ...
ಉದ್ಯಾನನಗರಿಯಲ್ಲಿ ಕಳೆದ ಕೆಲದಿನಗಳಿಂದ ರಾತ್ರಿಯ ವೇಳೆ ಮಳೆ ಸುರಿಯುತ್ತಿರುವುದರಿಂದ ಆರ್ಸಿಬಿ&ಡೆಲ್ಲಿ ಪಂದ್ಯವೂ ಮಳೆ ಭೀತಿಯ ನಡುವೆಯೇ ನಡೆಯಲಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಶೇ. 25ರಷ್ಟಿದೆ. ಅಂದರೆ ಮಳೆ ಕಾಡಿದರೂ ಸ್ಪಷ್ಟ ಲಿತಾಂಶ ಸಿಗಬಹುದು. ಒಂದು ವೇಳೆ ಪಂದ್ಯ ರದ್ದಾದರೆ ಆರ್ಸಿಬಿ ಅಧಿಕೃತವಾಗಿ ಪ್ಲೇಆ್ ರೇಸ್ನಿಂದ ಹೊರಬೀಳಲಿದೆ ಮತ್ತು ಡೆಲ್ಲಿ ತಂಡ ಗಣಿತಶಾಸ್ತ್ರದ ಪ್ರಕಾರವಷ್ಟೇ ಪ್ಲೇಆ್ ರೇಸ್ನಲ್ಲಿ ಉಳಿಯಲಿದೆ.
*ಮುಖಾಮುಖಿ: 30
ಆರ್ಸಿಬಿ: 18
ಡೆಲ್ಲಿ: 11
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.
ಡೆಲ್ಲಿಗೆ ಅಕ್ಷರ್ ಸಾರಥ್ಯ
ರಿಷಭ್ ಪಂತ್ ಗೈರಿನಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಡೆಲ್ಲಿ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಿದ್ದರು. ಆದರೆ ವಾರ್ನರ್ ಸದ್ಯ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಹೀಗಾಗಿ ಉಪನಾಯಕ ಅಕ್ಷರ್ಗೆ ಹಂಗಾಮಿ ಸಾರಥ್ಯ ನೀಡಲಾಗುತ್ತಿದೆ. ಅಕ್ಷರ್ ಡೆಲ್ಲಿ ತಂಡದ 13ನೇ ನಾಯಕ ಎನಿಸಲಿದ್ದಾರೆ.
ಪಂತ್ಗೆ ನಿಷೇಧ, ಪಂದ್ಯಕ್ಕೆ ಗೈರು
ರಾಜಸ್ಥಾನ ವಿರುದ್ಧ ಮೇ 7ರಂದು ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿನ ನಿಧಾನಗತಿ ಓವರ್ಗಾಗಿ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ 30 ಲಕ್ಷ ರೂ. ದಂಡದೊಂದಿಗೆ ಒಂದು ಪಂದ್ಯ ನಿಷೇಧ ಶಿೆಗೂ ಗುರಿಯಾಗಿದ್ದಾರೆ. ಇದರಿಂದಾಗಿ ಅವರು ಆರ್ಸಿಬಿ ವಿರುದ್ಧದ ಮಹತ್ವದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಡೆಲ್ಲಿ ತಂಡ ರಾಯಲ್ಸ್ ವಿರುದ್ಧ 20 ರನ್ಗಳಿಂದ ಗೆಲುವು ಕಂಡ ಪಂದ್ಯದಲ್ಲಿ ಕೊನೇ ಓವರ್ ಆರಂಭಗೊಂಡಾಗ ನಿಗದಿತ ಸಮಯಕ್ಕಿಂತ 10 ನಿಮಿಷ ಹಿಂದುಳಿದಿತ್ತು. ಡೆಲ್ಲಿ ತಂಡದ ಇತರ ಆಟಗಾರರಿಗೆ ಗರಿಷ್ಠ 12 ಲಕ್ಷ ರೂ. ಅಥವಾ ಪಂದ್ಯ ಸಂಭಾವನೆಯ ಶೇ. 50 ದಂಡ ವಿಧಿಸಲಾಗಿದೆ. ಡೆಲ್ಲಿ ತಂಡ ಹಾಲಿ ಟೂರ್ನಿಯಲ್ಲಿ 3ನೇ ಬಾರಿ ಓವರ್ರೇಟ್ ಪ್ರಮಾದ ಎಸಗಿರುವುದರಿಂದ ಪಂತ್ ಈ ಬಾರಿ ದಂಡದೊಂದಿಗೆ ನಿಷೇಧವನ್ನೂ ಎದುರಿಸಿದ್ದಾರೆ. ಈ ಮುನ್ನ ಮೊದಲ 2 ಬಾರಿ ಅವರಿಗೆ 12 ಮತ್ತು 24 ಲಕ್ಷ ರೂ. ದಂಡ ವಿಧಿಸಲಾಗಿತ್ತು. ನಿಧಾನಗತಿ ಓವರ್ಗಾಗಿ ಪಂತ್ಗೆ ದಂಡ&ನಿಷೇಧ ವಿಧಿಸಿದ ಮ್ಯಾಚ್ ರೆಫ್ರಿ ನಿರ್ಧಾರದ ವಿರುದ್ಧ ಡೆಲ್ಲಿ ತಂಡ ಬಿಸಿಸಿಐ ಒಂಬುಡ್ಸ್ಮನ್ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ವರ್ಚುವಲ್ ಮೂಲಕ ಈ ಪ್ರಕರಣದ ವಿಚಾರಣೆ ನಡೆಸಿದ ಒಂಬುಡ್ಸ್ಮನ್, ಮ್ಯಾಚ್ ರೆಫ್ರಿ ನಿರ್ಧಾರವನ್ನು ಎತ್ತಿಹಿಡಿದಿದ್ದಾರೆ. ಹೀಗಾಗಿ ಬಿಸಿಸಿಐ, ಪಂತ್ಗೆ ನಿಷೇಧ ಹೇರಿರುವ ನಿರ್ಧಾರವನ್ನು ತಡವಾಗಿ ಬಹಿರಂಗ ಪಡಿಸಿದೆ.