ಅಗರ್ತಲ: ಆತಿಥೇಯ ತ್ರಿಪುರ ತಂಡದ ಬಿಗಿ ಬೌಲಿಂಗ್ ದಾಳಿಯ ನಿರ್ವಹಣೆಯ ನಡುವೆ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಸಾಧಾರಣ ಮೊತ್ತದತ್ತ ಸಾಗಿದೆ.
ಮಹಾರಾಜ ವೀರ್ ವಿಕ್ರಮ್ ಕಾಲೇಜು ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ರಾಜ್ಯ ತಂಡ ದಿನದಂತ್ಯಕ್ಕೆ 78 ಓವರ್ಗಳಲ್ಲಿ 8 ವಿಕೆಟ್ಗೆ 241 ರನ್ ಪೇರಿಸಿದೆ. ಅರ್ಧಶತಕ ಬಾರಿಸಿ ರಾಜ್ಯದ ಮಾನ ಕಾಪಾಡಿದ ವೈಶಾಕ್ ವಿಜಯ್ಕುಮಾರ್ (50*) ಜತೆಗೆ ವಿದ್ವತ್ ಕಾವೇರಪ್ಪ (4) ಕ್ರೀಸ್ನಲ್ಲಿದ್ದಾರೆ. ಮಂಜಿನ ವಾತಾವರಣದಿಂದಾಗಿ ಬೆಳಗ್ಗೆ ಆಟ ತಡವಾಗಿ ಆರಂಭಗೊಂಡಿತು.
ಮಯಾಂಕ್, ಕಿಶನ್ ಅರ್ಧಶತಕ
ಆರಂಭಿಕ ಆಘಾತ ಎದುರಿಸಿದ ಕರ್ನಾಟಕ 16 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಪರದಾಡಿತು. ಆಗ ಜತೆಗೂಡಿದ ಮಯಾಂಕ್ ಅಗರ್ವಾಲ್&ಕಿಶನ್ ಬಿದರೆ ಜೋಡಿ 4ನೇ ವಿಕೆಟ್ಗೆ 87 ರನ್ ಸೇರಿಸಿ ಚೇತರಿಕೆ ಒದಗಿಸಿತು. ಇವರಿಬ್ಬರ ನಿರ್ಗಮನದ ಬಳಿಕ ಬಾಲಂಗೋಚಿ ವೈಶಾಕ್ ವಿಜಯ್ಕುಮಾರ್ ಬಿರುಸಿನ ಆಟದೊಂದಿಗೆ ಮೊತ್ತ ಏರಿಸಲು ನೆರವಾದರು.
ರಾಜ್ಯದ ಪರ ನಾಲ್ವರು ಪದಾರ್ಪಣೆ
ಪಂದ್ಯದಲ್ಲಿ ಕರ್ನಾಟಕ ಪರ ನಾಲ್ವರು ಆಟಗಾರರಾದ ಕೆವಿ ಅನೀಶ್, ಕಿಶನ್ ಬಿದರೆ, ಹಾರ್ದಿಕ್ ರಾಜ್ ಮತ್ತು ಕೆ. ಶಶಿಕುಮಾರ್ ರಣಜಿಗೆ ಪದಾರ್ಪಣೆ ಮಾಡಿದರು. ಮನೀಷ್ ಪಾಂಡೆ, ಡಿ. ನಿಶ್ಚಲ್, ಶುಭಾಂಗ್ ಹೆಗ್ಡೆ ಮತ್ತು ರೋಹಿತ್ ಕುಮಾರ್ ಎಸಿ ಬದಲಿಗೆ ಅವರು ಅವಕಾಶ ಪಡೆದರು. ಪಡಿಕಲ್ ಸ್ಥಾನವನ್ನು ಆರ್. ಸಮರ್ಥ್ ತುಂಬಿದರೆ, ವೆಂಕಟೇಶ್ ಸ್ಥಾನದಲ್ಲಿ ವಿದ್ವತ್ ಕಾವೇರಪ್ಪ ತಂಡಕ್ಕೆ ಮರಳಿದರು.
ಕರ್ನಾಟಕ: 78 ಓವರ್ಗಳಲ್ಲಿ 8 ವಿಕೆಟ್ಗೆ 241 (ಸಮರ್ಥ್ 1, ಮಯಾಂಕ್ 51, ಅನೀಶ್ 1, ನಿಕಿನ್ 4, ಕಿಶನ್ 62, ಶರತ್ 25, ಹಾರ್ದಿಕ್ 9, ವೈಶಾಕ್ 50*, ಶಶಿಕುಮಾರ್ 19, ರಾಣಾ ದತ್ತ 32ಕ್ಕೆ 3, ಮಣಿಶಂಕರ್ 35ಕ್ಕೆ 2, ಅಭಿಜಿತ್ ಸರ್ಕಾರ್ 55ಕ್ಕೆ 2).