ಲಾಹೋರ್: ಚಾಂಪಿಯನ್ಸ್ ಟ್ರೋಫಿ ಈ ಬಾರಿ ಪಾಕಿಸ್ತಾನದಲ್ಲಿ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ದೊಡ್ಡ ವಿವಾದವೇ ಭುಗಿಲೆದ್ದಿದೆ. 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಪಾಕ್ ಮಾಜಿ ಆಟಗಾರರ ಹೇಳಿಕೆಗೆ ಟೀಮ್ ಇಂಡಿಯಾ ಕಿಂಚಿತ್ತು ಆದ್ಯತೆ ನೀಡುತ್ತಿಲ್ಲ. ಇದರಿಂದ ತೀವ್ರ ಕೆರಳಿರುವ ಪಾಕಿಸ್ತಾನ, ಇದೇ ಮುಂದುವರಿದರೆ ಏನು ಮಾಡೋದು? ಎಂಬ ಚಿಂತೆಯಲ್ಲಿ ಮುಳಗಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಮುಖ್ಯಸ್ಥ ಖಲೀದ್ ಮೊಹಮ್ಮದ್ ಶಾಕಿಂಗ್ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರೀಲ್ಸ್ ಮಾಡಲು ದುಬಾರಿ ಕ್ಯಾಮೆರಾ ಖರೀದಿಸುವ ಆಸೆ: ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಖತರ್ನಾಕ್ ಲೇಡಿ!
ಒಂದೆಡೆ ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಭಾರತ ತಂಡ 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಬರಬೇಕು ಎಂದು ಒತ್ತಾಯಿಸಿದರೆ, ಮತ್ತೊಂದೆಡೆ ಯಾವುದೇ ಕಾರಣಕ್ಕೂ ನಾವು ಪಾಕ್ಗೆ ಬರುವ ಮಾತೇ ಇಲ್ಲ ಎಂದು ಟೀಮ್ ಇಂಡಿಯಾ ಪಟ್ಟುಹಿಡಿದು ಕುಳಿತಿದೆ. ಇನ್ನು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ "ನಾವು ಚಾಂಪಿಯನ್ಸ್ ಟ್ರೋಫಿಯನ್ನು ಇಲ್ಲಿಯೇ ನಡೆಸುತ್ತೇವೆ. ಒಂದು ವೇಳೆ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸದಿದ್ದರೆ ಕ್ರೀಡಾ ಜಗತ್ತೇ ಮುಳಿಗಿದಂತಲ್ಲ. ಭಾರತವನ್ನು ಹೊರತುಪಡಿಸಿ ಇನ್ನೂ ಅನೇಕ ತಂಡಗಳಿವೆ" ಎಂದು ಕ್ರಿಕೆಟಿಗ ಹಸನ್ ಅಲಿ ಸೊಕ್ಕಿನ ಮಾತುಗಳನ್ನಾಡಿದರು.
ಇದೀಗ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದೇ ಹೋದರೆ ತಮಗೆ ಏನೆಲ್ಲಾ ತೊಂದರೆಯಾಗಬಹುದು ಎಂಬುದನ್ನು ಅವಲೋಕಿಸಿ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಅಧ್ಯಕ್ಷ ಖಲಿದ್ ಮೊಹಮ್ಮದ್, "ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಭಾರತವು ಪಾಕಿಸ್ತಾನದಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ. 2025ರಲ್ಲಿ ಫೆಬ್ರವರಿ-ಮಾರ್ಚ್‌ನಲ್ಲಿ ನಿಗದಿಪಡಿಸಲಾದ ಐಸಿಸಿ ಟೂರ್ನಮೆಂಟ್‌ಗಾಗಿ ನೆರೆಯ ದೇಶಕ್ಕೆ ತಮ್ಮ ತಂಡವನ್ನು ಕಳುಹಿಸಲು ಬಿಸಿಸಿಐ ಒಪ್ಪದೆ ಇರುವುದು ಕೊಂಚ ಕಷ್ಟಕರವಾಗಿದೆ" ಎಂದರು.
“ಟೀಮ್ ಇಂಡಿಯಾ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಮೇಲೆ ಸಾಕಷ್ಟು ಪ್ರಭಾವವನ್ನು ಹೊಂದಿದೆ. ತಮ್ಮ ಆಟಗಾರರನ್ನು ಬಿಸಿಸಿಐ ನಮ್ಮ ದೇಶಕ್ಕೆ ಕಳುಹಿಸದೆ ಹೋದರೆ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕೂಡ ಪಾಕಿಸ್ತಾನವನ್ನು ಬಹಿಷ್ಕರಿಸಬಹುದು. ಇದರಿಂದ ಬಹಳ ಪರಿಣಾಮ ಬೀರಲಿದೆ. ಐಸಿಸಿ ಮೇಲೆ ಟೀಮ್ ಇಂಡಿಯಾಗೆ ಗಟ್ಟಿ ಹಿಡಿತವಿದೆ. ಇಲ್ಲಿ ನಾವು ಅಂದುಕೊಂಡ ಹಾಗೆ ಏನು ಮಾಡಲು ಸಾಧ್ಯವಿಲ್ಲ. ಅದರಿಂದ ನಮಗೇನು ಲಾಭವೂ ಇಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).