ನವದೆಹಲಿ: ಐಸಿಸಿಯ ಮುಂದಿನ ಚೇರ್ಮನ್ ಆಗುವ ನಿಟ್ಟಿನಲ್ಲಿ ಜಯ್ ಷಾ ಹೆಸರು ಕಳೆದ ಕೆಲದಿನಗಳಿಂದ ಮುಂಚೂಣಿಯಲ್ಲಿದೆ. ಆದರೆ ಜಯ್ ಷಾ ಐಸಿಸಿಗೆ ಹೋದರೆ ಬಿಸಿಸಿಐನಲ್ಲಿ ಅವರಿಂದ ತೆರವಾಗಲಿರುವ ಕಾರ್ಯದರ್ಶಿ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗದಂತಾಗಿದೆ.
ಸದ್ಯ ಬಿಸಿಸಿಐ ಅಧ್ಯಕ್ಷರ ಹುದ್ದೆ ರಬ್ಬರ್ಸ್ಟಾಂಪ್ನಂತಿದ್ದು, ಕಾರ್ಯದರ್ಶಿಯಾಗಿ ಜಯ್ ಷಾ ಅವರೇ ಪ್ರಭಾವಿ ಆಡಳಿತ ನಡೆಸುತ್ತಿದ್ದರು. ಹೀಗಾಗಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಕೆಲವೇ ಸಂಭಾವ್ಯ ಅಭ್ಯರ್ಥಿಗಳು ಸದ್ಯಕ್ಕೆ ಕಾಣಿಸುತ್ತಿದ್ದಾರೆ.
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಸದ್ಯ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಆದರೆ ಕೂಲಿಂಗ್&ಆ್ಗೆ ಮುನ್ನ ಅವರೂ ಒಂದು ವರ್ಷದವರೆಗೆ ಮಾತ್ರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ.
ಮಹಾರಾಷ್ಟ್ರದ ಬಿಜೆಪಿ ನಾಯಕರಾಗಿರುವ ಆಶಿಷ್ ಶೆಲಾರ್ ಸದ್ಯ ಬಿಸಿಸಿಐ ಖಜಾಂಚಿಯಾಗಿದ್ದಾರೆ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯ ಆಡಳಿತಾಧಿಕಾರಿಯಾಗಿಯೂ ಪ್ರಭಾವಿಯಾಗಿದ್ದಾರೆ. ಆದರೆ ಅವರು ಪೂರ್ಣಪ್ರಮಾಣದ ರಾಜಕಾರಣಿಯಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಹೆಚ್ಚಿನ ಸಮಯ ನೀಡಲು ಅವರು ಸಿದ್ಧರೇ ಎಂಬ ಪ್ರಶ್ನೆ ಏಳುತ್ತದೆ.
ಹಿಮಾಚಲ ಪ್ರದೇಶದ ಅರುಣ್ ಧುಮಾಲ್ ಹಾಲಿ ಐಪಿಎಲ್ ಚೇರ್ಮನ್ ಆಗಿದ್ದಾರೆ. ಈ ಹಿಂದೆ ಬಿಸಿಸಿಐ ಖಜಾಂಚಿಯಾಗಿದ್ದರು. ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹೋದರರೂ ಆಗಿರುವ ಧುಮಾಲ್, ಕಾರ್ಯದರ್ಶಿ ಹುದ್ದೆಗೆ ಸದ್ಯದ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ.
ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ, ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಹನ್ ಜೇಟ್ಲಿ, ಬಂಗಾಳ ಕ್ರಿಕೆಟ್ ಸಂಸ್ಥೆ ಮಾಜಿ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ, ಪಂಜಾಬ್ನ ದಿಲ್ಶೇರ್ ಖನ್ನ, ಗೋವಾದ ವಿಪುಲ್ ಪಡ್ಕೆ, ಛತ್ತೀಸ್ಗಢದ ಪ್ರಭ್ತೇಜ್ ಭಾಟಿಯಾ ಇತರ ಅಚ್ಚರಿಯ ಅಭ್ಯರ್ಥಿಯಾಗಬಲ್ಲವರಾಗಿದ್ದಾರೆ.
ಜಯ್ ಷಾ ಬಳಿಕ 4 ದಿನಗಳ ಕಾಲಾವಕಾಶ
ಜಯ್ ಷಾಗೆ ಐಸಿಸಿ ಮಂಡಳಿಯ 16ರ ಪೈಕಿ 15 ಸದಸ್ಯರ ಬೆಂಬಲವಿದೆ. ಆದರೆ ಬಿಸಿಸಿಐ ಕಾರ್ಯದರ್ಶಿ ಆಗಿ ಇನ್ನೂ ಒಂದು ವರ್ಷದ ಅವಧಿ ಬಾಕಿ ಇರುವ ನಡುವೆಯೇ ಅವರು ಐಸಿಸಿಯತ್ತ ಹೋಗುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ. ಈ ಬಗ್ಗೆ ನಿರ್ಧರಿಸಲು ಅವರ ಬಳಿ ಇನ್ನು ಕೇವಲ 4 ದಿನಗಳ ಕಾಲಾವಕಾಶವಿದೆ. ಯಾಕೆಂದರೆ ಐಸಿಸಿ ಚೇರ್ಮನ್ ಹುದ್ದೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೇ ದಿನವಾಗಿದೆ. ಡಿಸೆಂಬರ್ 1ರಿಂದ ಐಸಿಸಿಯ ಹೊಸ ಚೇರ್ಮನ್ ಅಧಿಕಾರಾವಧಿ ಶುರುವಾಗಲಿದೆ.
ಬಿಸಿಸಿಐ ಚೇರ್ಮನ್ ಆಗಿ 2025ರ ಅಕ್ಟೋಬರ್ವರೆಗೆ ಜಯ್ ಷಾ ಅವಧಿ ಇದೆ. ಅಲ್ಲಿಗೆ ಅವರ ಸತತ 2 ವರ್ಷಗಳ ಅವಧಿಯೂ ಮುಗಿಯುವುದರಿಂದ 3 ವರ್ಷಗಳ ಕೂಲಿಂಗ್&ಆ್ಗೆ ತೆರಳಬೇಕಾಗುತ್ತದೆ. ಹೀಗಾಗಿ ಐಸಿಸಿ ಹುದ್ದೆಗೇರಲು ಅದು ಅವರಿಗೆ ಪಕ್ವ ಸಮಯವಾಗಿತ್ತು. ಆದರೆ ಹಾಲಿ ಚೇರ್ಮನ್ ಗ್ರೇಗ್ ಬಾರ್ಕ್ಲೇ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿರುವುದರಿಂದ ಹೊಸ ಚೇರ್ಮನ್ ಆಗಿ ಜಯ್ ಷಾ ಈಗಲೇ ಅಧಿಕಾರ ಸ್ವೀಕರಿಸುವ ಸಂದಿಗ್ಧತೆಗೂ ಸಿಲುಕಿದ್ದಾರೆ.