ನವದೆಹಲಿ: ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ( Mohammed Shami ) ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಡುವಿನ ಮಾತಿನ ಸಮರ ಅಂತ್ಯಗೊಂಡಿರುವಂತೆ ಕಾಣುತ್ತಿದೆ. ಅದಕ್ಕೆ ಸಾಕ್ಷಿ 2025-26ರ ರಣಜಿ ಟ್ರೋಫಿ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡ ಗುಜರಾತ್ ವಿರುದ್ಧ ಜಯಗಳಿಸಿದ ನಂತರ ಶಮಿ ಅವರು ನೀಡಿರುವ ಹೇಳಿಕೆಗಳು.
ದೇಶೀಯ ಪ್ರಥಮ ದರ್ಜೆ ಟೂರ್ನಮೆಂಟ್ ಎನಿಸಿಕೊಂಡಿರುವ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡುತ್ತಿರುವ ಶಮಿ (3/44; 5/38), ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ, ನಾನಿನ್ನೂ ಫಾರ್ಮ್ ಕಳೆದುಕೊಂಡಿಲ್ಲ ಎಂದು ಸಾಬೀತುಪಡಿಸಿದರು. ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ (ಅ.28) ಕೊನೆಗೊಂಡ ಗ್ರೂಪ್ 'ಸಿ' ಪಂದ್ಯದಲ್ಲಿ ಪಶ್ಚಿಮ ಬಂಗಾಳ, ಗುಜರಾತ್ ವಿರುದ್ಧ 141 ರನ್‌ಗಳ ಭಾರಿ ಅಂತರದಿಂದ ಭರ್ಜರಿ ಜಯ ಸಾಧಿಸಿತು.
ಕೊನೆಯ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಅನ್ನು ರಾತ್ರಿ 170/6 ಕ್ಕೆ ಪಶ್ಚಿಮ ಬಂಗಾಳ ಡಿಕ್ಲೇರ್ ಮಾಡಿತು. ಓವರ್‌ನೈಟ್ ಬ್ಯಾಟ್ಸ್‌ಮನ್ ಅನುಸ್ತುಪ್ ಮಜುಂದಾರ್ (58 ರನ್, 9 ಬೌಂಡರಿ) ಅರ್ಧಶತಕ ಪೂರೈಸಿದರೆ, ಆಕಾಶ್‌ದೀಪ್ (ಅಜೇಯ 25 ರನ್, 1 ಬೌಂಡರಿ, 2 ಸಿಕ್ಸರ್) ಸಾಧಾರಣ ಸ್ಕೋರ್ ಗಳಿಸಿದರು. 112 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಗುಜರಾತ್‌ಗೆ 327 ರನ್‌ಗಳ ಗುರಿಯನ್ನು ನೀಡಿತು. ಗುರಿ ಬೆನ್ನಟ್ಟಲು ಬಂದ ಗುಜರಾತ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಪತನಗೊಂಡಿತು. ಉರ್ವಿಲ್ ಪಟೇಲ್ (ಅಜೇಯ 109 ರನ್, 16 ಬೌಂಡರಿ) ಅಜೇಯ ಶತಕ ಗಳಿಸಿದರು. ಮೊಹಮ್ಮದ್ ಶಮಿ ಅವರು ಹತ್ತು ಓವರ್‌ಗಳಲ್ಲಿ 5 ನಿರ್ಣಾಯಕ ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿಗೆ ದಾರಿ ಮಾಡಿಕೊಟ್ಟರು. ಶಹಬಾಜ್ ಅಹ್ಮದ್ 3 ವಿಕೆಟ್‌ಗಳನ್ನು ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಪಡೆದ ಶಹಬಾಜ್ ಅವರಿಗೆ 'ಪಂದ್ಯಶ್ರೇಷ್ಠ' ಪ್ರಶಸ್ತಿ ನೀಡಲಾಯಿತು.
ಗುಜರಾತ್ ವಿರುದ್ಧದ ಗೆಲುವಿನ ನಂತರ ಶಮಿ ಅವರನ್ನು ವರದಿಗಾರರು ಮಾತನಾಡಿಸಿದಾಗ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದರು. ನಾನು ಮಾತನಾಡಿದಾಗಲೆಲ್ಲ ಕತೆಯೇ ಬದಲಾಗುತ್ತದೆ ಎಂದರು. ಅಲ್ಲದೆ, ನಾನು ಯಾವಾಗಲೂ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೇನೆ. ನೀವು (ಮಾಧ್ಯಮ) ನನ್ನನ್ನು ವಿವಾದಾತ್ಮಕ ಬೌಲರ್ ಆಗಿ ಪರಿವರ್ತಿಸಿದ್ದೀರಿ. ನಾನೀಗ ಏನೇ ಹೇಳಿದರೂ, ಖಂಡಿತವಾಗಿಯೂ ತೊಂದರೆಗೆ ಸಿಲುಕುತ್ತೇನೆ. ಏನು ಹೇಳಬೇಕೆಂದು ನನಗೆ ತೋಚುತ್ತಿಲ್ಲ. ಈ ವಿಚಾರದಲ್ಲಿ ನಾನು ನಿಮ್ಮನ್ನು ದೂಷಿಸುತ್ತಿಲ್ಲ. ಏಕೆಂದರೆ, ಎಲ್ಲರೂ ನನಗೆ ಅದೇ ರೀತಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ತಮಗೆ ಇಷ್ಟ ಬಂದಂತೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಶಮಿ ಹೇಳಿದರು. ಈ ಹಿಂದೆ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದ ಶಮಿ ಇದೀಗ ಯು-ಟರ್ನ್ ತೆಗೆದುಕೊಂಡಿದ್ದನ್ನು ನೋಡಿ ವರದಿಗಾರರು ಆಶ್ಚರ್ಯಚಕಿತರಾದರು.
ಅಂದಹಾಗೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಿಂದ ಶಮಿ ಅವರನ್ನು ಹೊರಗಿಟ್ಟಿದ್ದಕ್ಕೆ ಈ ಹಿಂದೆ ಪ್ರತಿಕ್ರಿಯಿಸಿದ ಅಗರ್ಕರ್, ಶಮಿ ಅವರ ಫಿಟ್ನೆಸ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಶಮಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, ರಣಜಿ ಟ್ರೋಫಿಯಲ್ಲಿ ಆಡುತ್ತಿರುವಾಗ ಏಕದಿನ ಪಂದ್ಯಗಳಲ್ಲಿ ಆಡಲು ನನ್ನಿಂದ ಸಾಧ್ಯವಿಲ್ಲವೇ? ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ ಅಗರ್ಕರ್, ಶಮಿ ಫಿಟ್ ಆಗಿಲ್ಲದ ಕಾರಣ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದರು. ನಾನಾಡುವ ಆಟ ಮಾತ್ರ ನನ್ನ ಪರವಾಗಿ ಮಾತನಾಡುವ ಏಕೈಕ ವಿಷಯ ಎನ್ನುವ ಮೂಲಕ ಶಮಿ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.
ಇನ್ನು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ ಶಮಿ, ಅಗರ್ಕರ್‌ಗೆ ತಮ್ಮ ಆಟದ ಮೂಲಕವೇ ಉತ್ತರ ನೀಡಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾದರು. ಆದರೆ, ತಾವು ವಿವಾದಗಳಲ್ಲಿ ಸಿಲುಕಲು ಮಾಧ್ಯಮಗಳೇ ಕಾರಣ ಎಂದು ಶಮಿ ಅವರು ಪರೋಕ್ಷವಾಗಿ ಹೇಳಿದ್ದು ಇಲ್ಲಿನ ಗಮನಾರ್ಹ ಸಂಗತಿ. ತಾವೇ ಆ ರೀತಿ ಹೇಳಿ ಇದೀಗ ತಾವೇ ಉಲ್ಟಾ ಹೊಡೆದಿದ್ದಾರೆ. ಬಹುಶಃ ಬಿಸಿಸಿಐ ಯಾವುದೇ ಹೇಳಿಕೆ ಕೊಡದಂತೆ ತಡೆದಿರಬಹುದು ಎನ್ನಲಾಗಿದೆ.
ಇನ್ನು ಕೋಲ್ಕತದಲ್ಲಿ ನಡೆದ ರಣಜಿ ಪಂದ್ಯದ ಸಮಯದಲ್ಲಿ, ಪೂರ್ವ ವಲಯದಿಂದ ಟೀಮ್ ಇಂಡಿಯಾದ ಹೊಸ ಆಯ್ಕೆದಾರರಾಗಿ ಆಯ್ಕೆಯಾದ ಆರ್‌ಪಿ ಸಿಂಗ್, ಶಮಿ ಅವರೊಂದಿಗೆ ಮಾತುಕತೆ ನಡೆಸಿದರು. ಅವರಿಂದ ಭರವಸೆ ಪಡೆದ ನಂತರ ಶಮಿ ಈ ರೀತಿ ಪ್ಲೇಟ್ ಬದಲಾಯಿಸಿದ್ದಾರೆ ಎಂಬ ಅಭಿಪ್ರಾಯಗಳಿವೆ. (ಏಜೆನ್ಸೀಸ್)