ಕ್ರೀಡೆ

ರ‌್ಯಾಂಕಿಂಗ್‌ನಲ್ಲಿ ಏರಿಕೆ ಕಂಡ ಶಾನ್ ಮಸೂದ್, ಕ್ರಿಸ್ ವೋಕ್ಸ್

ದುಬೈ: ಪಾಕಿಸ್ತಾನ ವಿರುದ್ಧದ ಮೊದಲ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಲ್ರೌಂಡರ್ ಕ್ರಿಸ್ ವೋಕ್ಸ್ ಐಸಿಸಿ ಟೆಸ್ಟ್ ರ‌್ಯಾಂಕಿಂಗ್ ಬ್ಯಾಟಿಂಗ್ ವಿಭಾಗದಲ್ಲಿ ಬಡ್ತಿ ಪಡೆದಿದ್ದಾರೆ. ಶನಿವಾರ ಅಂತ್ಯಗೊಂಡ ಪಂದ್ಯದಲ್ಲಿ ಅಜೇಯ 84 ರನ್ ಪೇರಿಸಿದ ವೋಕ್ಸ್ ಬ್ಯಾಟಿಂಗ್ ವಿಭಾಗದಲ್ಲಿ 18ನೇ ಸ್ಥಾನಕ್ಕೇರಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಪಾಕಿಸ್ತಾನದ ಶಾನ್ ಮಸೂದ್ ವೃತ್ತಿ ಶ್ರೇಷ್ಠ 19ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ವೋಕ್ಸ್ 7ನೇ ಸ್ಥಾನಕ್ಕೇರಿದ್ದಾರೆ.

ಪಾಕಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಮಸೂದ್ 156 ರನ್ ಸಿಡಿಸಿದ ಲವಾಗಿ ಪಾಕಿಸ್ತಾನ ಮೊದಲ ಇನಿಂಗ್ಸ್ 107 ರನ್ ಮುನ್ನಡೆ ಸಾಧಿಸಿತ್ತು. ಇದರಿಂದ 14 ಸ್ಥಾನ ಏರಿಕೆ ಕಂಡಿರುವ ಮಸೂದ್, ಬಾಬರ್ ಅಜಮ್ (6ನೇ ಸ್ಥಾನ) ಬಳಿಕ ಉತ್ತಮ ರ‌್ಯಾಂಕಿಂಗ್ ಹೊಂದಿರುವ ಪಾಕಿಸ್ತಾನದ 2ನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಮಸೂದ್ ಇದಕ್ಕೂ ಮೊದಲು 32ನೇ ಸ್ಥಾನದಲ್ಲಿದ್ದರು.

ಪಾಕಿಸ್ತಾನ ವಿರುದ್ಧದ ಗೆಲುವಿನಿಂದ ಇಂಗ್ಲೆಂಡ್ ತಂಡ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 266 ರನ್ ಕಲೆಹಾಕುವ ಮೂಲಕ 3ನೇ ಸ್ಥಾನ ಕಾಯ್ದುಕೊಂಡಿದೆ. ಇಂಗ್ಲೆಂಡ್‌ಗಿಂತ 30 ಅಂಕ ಮುನ್ನಡೆ ಹೊಂದಿರುವ ಆಸ್ಟ್ರೇಲಿಯಾದ 2ನೇ ಸ್ಥಾನದಲ್ಲಿದ್ದರೆ, 360 ಪಾಯಿಂಟ್ಸ್ ಹೊಂದಿರುವ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ.