ನವದೆಹಲಿ: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು. ಫೈನಲ್ಗೆ ಹೋಗುವ ಭರವಸೆಯೂ ಇತ್ತು. ಆದರೆ, ಆ ಭರವಸೆ ಇದೀಗ ಹುಸಿಯಾಗಿದೆ. ಇಂದು ನಡೆದು ಪಂದ್ಯದಲ್ಲಿ ರಶೀದ್ ಖಾನ್ ಪಡೆ ಸೋಲನ್ನು ಅನುಭವಿಸಿದೆ.
ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ಮತ್ತು ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಸೋಲಿಸಿ ಸೆಮಿಸ್ ಪ್ರವೇಶಿಸುವ ಮೂಲಕ ಅಫ್ಘಾನಿಸ್ತಾನ ಕ್ರಿಕೆಟ್ ಲೋಕದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಅಲ್ಲದೆ, ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದ ಅಫ್ಘಾನಿಸ್ತಾನದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಏಕೆಂದರೆ, ದಕ್ಷಿಣ ಆಫ್ರಿಕಾ ಒಮ್ಮೆಯೂ ಮೆಗಾ ಟೂರ್ನಮೆಂಟ್ಗಳಲ್ಲಿ ಸೆಮಿಫೈನಲ್ ಗೆದ್ದಿರಲಿಲ್ಲ. ಏಕದಿನ, ಟಿ20 ವಿಶ್ವಕಪ್ ಯಾವುದೇ ಇರಲಿ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಹಂತ ದಾಟಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ಅವರನ್ನು ಚೋಕರ್ಸ್ ಎಂದು ಕರೆಯಲಾಗುತ್ತದೆ. ಅಂತಹ ತಂಡದೊಂದಿಗೆ ಎದುರಾಳಿ ಆಗಿ ಆಡಿದ ಅಫ್ಘಾನಿಸ್ತಾನ ಫೈನಲ್ ಪ್ರವೇಶ ಪಡೆಯುತ್ತದೆ ಎಂದು ಎಲ್ಲರು ನಂಬಿದ್ದರು.
ಆದರೆ, ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಅವರು ಕೇವಲ 56 ರನ್‌ಗಳಿಗೆ ಕುಸಿದರು. ಆ ಬಳಿಕ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ಕಳೆದುಕೊಂಡು ಆ ಸಣ್ಣ ಗುರಿಯನ್ನು ಮುರಿದು ಫೈನಲ್ ತಲುಪಿತು. ಇಂತಹ ಹೀನಾಯ ಸೋಲಿನಿಂದ ಬಳಲುತ್ತಿರುವ ಅಫ್ಘಾನಿಸ್ತಾನಕ್ಕೆ ಐಸಿಸಿ ಮತ್ತೊಂದು ಶಾಕ್ ನೀಡಿದೆ. ತಂಡದ ನಾಯಕ ರಶೀದ್ ಖಾನ್‌ಗೆ ಐಸಿಸಿ ಛೀಮಾರಿ ಹಾಕಿದೆ.
ಮೈದಾನದಲ್ಲಿ ಬ್ಯಾಟ್ ಎಸೆದಿದ್ದಕ್ಕಾಗಿ ಐಸಿಸಿ ರಶೀದ್‌ಗೆ ಛೀಮಾರಿ ಹಾಕಿ ಡಿಮೆರಿಟ್ ಪಾಯಿಂಟ್ ನೀಡಿದೆ. ಕಳೆದ 24 ತಿಂಗಳಲ್ಲಿ ಇದು ರಶೀದ್ ಅವರ ಮೊದಲ ತಪ್ಪಾಗಿದ್ದರಿಂದ ಹೆಚ್ಚಿನ ಕ್ರಮ ತೆಗೆದುಕೊಳ್ಳಲಿಲ್ಲ. ಬ್ಯಾಟ್ ಅನ್ನು ಉದ್ದೇಶಪೂರ್ವಕವಾಗಿ ಎಸೆಯವುದು ICC ನೀತಿ ಸಂಹಿತೆಯ ಆರ್ಟಿಕಲ್ 2.9 ರ ಅಡಿಯಲ್ಲಿ ಬರುತ್ತದೆ ಮತ್ತು ಇದನ್ನು ಹಂತ 1 ಅಪರಾಧವೆಂದು ಪರಿಗಣಿಸಲಾಗುತ್ತದೆ.
ಅಂದಹಾಗೆ ರಶೀದ್ ಖಾನ್ ಆಕ್ರೋಶದಿಂದ ಬ್ಯಾಟ್ ಅನ್ನು ನೆಲಕ್ಕೆ ಅಪ್ಪಳಿಸಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಅಲ್ಲ. ಸೂಪರ್ 8 ಅಂಗವಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಅಫ್ಘಾನಿಸ್ತಾನ ನಾಯಕ ಮೈದಾನದಲ್ಲಿ ಬ್ಯಾಟ್ ಎಸೆದರು. ಅಫ್ಘಾನಿಸ್ತಾನದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರಶೀದ್ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ಅಪ್ಪಳಿಸಿದರು. ಈ ವೇಳೆ ಕ್ರೀಸ್ನಲ್ಲಿ ಜೊತೆಗಿದ್ದ ಕರೀಂ ಜನತ್ ಎರಡನೇ ರನ್ಗೆ ಬಾರದೇ ಇದ್ದದ್ದು ರಶೀದ್ ಖಾನ್ ಕೋಪಕ್ಕೆ ಕಾರಣವಾಗಿತ್ತು. ಆ ಸಿಟ್ಟಿನಲ್ಲಿ ಬ್ಯಾಟನ್ನು ನೆಲಕ್ಕೆ ಎಸೆದಿದ್ದರು. ಐಸಿಸಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಶೀದ್ ಖಾನ್ ಅವರಿಗೆ ಛೀಮಾರಿ ಹಾಕಿದೆ. (ಏಜೆನ್ಸೀಸ್)