ಬೆಂಗಳೂರು: ಭಾರತದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಐಸಿಸಿ ಟಿ20 ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೆಲಿಯಾ ವಿರುದ್ಧದ ಟಿ20 ಸರಣಿಯಲ್ಲಿ 9 ವಿಕೆಟ್ ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ 23 ವರ್ಷದ ರವಿ ಬಿಷ್ಣೋಯಿ, ಆ ಸಾಧನೆಯ ಫಲವಾಗಿ ವಿಶ್ವ ನಂ. 1 ಟಿ20 ಬೌಲರ್ ಎನಿಸಿದ್ದಾರೆ. ಇದರೊಂದಿಗೆ ಐಸಿಸಿ ಟಿ20 ರ್ಯಾಂಕಿಂಗ್ನ ತಂಡ, ಬ್ಯಾಟಿಂಗ್ (ಸೂರ್ಯಕುಮಾರ್ ಯಾದವ್) ಮತ್ತು ಬೌಲಿಂಗ್ ವಿಭಾಗದಲ್ಲೇ ಭಾರತೀಯರೇ ನಂ. 1 ಆದಂತಾಗಿದೆ.
2022ರ ೆಬ್ರವರಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ರವಿ ಬಿಷ್ಣೋಯಿ ಇದುವರೆಗೆ ಆಡಿದ 21 ಟಿ20 ಪಂದ್ಯಗಳಲ್ಲಿ 34 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆ 699 ರೇಟಿಂಗ್ ಪಾಯಿಂಟ್ ಕಲೆಹಾಕುವ ಮೂಲಕ 5 ಸ್ಥಾನ ಬಡ್ತಿ ಪಡೆದಿರುವ ಬಿಷ್ಣೋಯಿ, ಅ್ಘಾನಿಸ್ತಾನದ ರಶೀದ್ ಖಾನ್ (692) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ವಾನಿಂದು ಹಸರಂಗ ಮತ್ತು ಇಂಗ್ಲೆಂಡ್ನ ಆದಿಲ್ ರಶೀದ್ ತಲಾ 679 ಅಂಕ ಕಲೆಹಾಕಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ.
ಬಿಷ್ಣೋಯಿ ಟಿ20 ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗಿರುವ ಏಕೈಕ ಭಾರತೀಯರಾಗಿದ್ದಾರೆ. 18ನೇ ಸ್ಥಾನದಲ್ಲಿರುವ ಅಕ್ಷರ್ ಪಟೇಲ್ ನಂತರದ ಅತ್ಯುತ್ತಮ ರ್ಯಾಂಕ್ ಹೊಂದಿರುವ ಭಾರತೀಯ ಬೌಲರ್ ಆಗಿದ್ದಾರೆ. ಆಸೀಸ್ ವಿರುದ್ಧದ ಸರಣಿಯಲ್ಲಿ ನಾಯಕರೂ ಆಗಿ 4-1ರಿಂದ ಸರಣಿ ಗೆಲುವು ಕಂಡ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಹಾರ್ದಿಕ್ ಪಾಂಡ್ಯ 3ನೇ ಸ್ಥಾನದಲ್ಲಿ ಉಳಿದಿದ್ದಾರೆ.
ನಂ. 1 ಭಾರತೀಯರು
*ಟಿ20 ತಂಡ ರ್ಯಾಂಕಿಂಗ್
*ಏಕದಿನ ತಂಡ ರ್ಯಾಂಕಿಂಗ್
*ಟೆಸ್ಟ್ ತಂಡ ರ್ಯಾಂಕಿಂಗ್
*ಏಕದಿನ ಬ್ಯಾಟಿಂಗ್: ಶುಭಮಾನ್ ಗಿಲ್
*ಟಿ20 ಬ್ಯಾಟಿಂಗ್: ಸೂರ್ಯಕುಮಾರ್
*ಟೆಸ್ಟ್ ಬೌಲಿಂಗ್: ಆರ್. ಅಶ್ವಿನ್
*ಟಿ20 ಬೌಲಿಂಗ್: ರವಿ ಬಿಷ್ಣೋಯಿ
*ಟೆಸ್ಟ್ ಆಲ್ರೌಂಡರ್: ರವೀಂದ್ರ ಜಡೇಜಾ