Pakistan : ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜನೆ ಮಾಡಿದೆ. ಈ ಮೆಗಾ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೇ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವ ಮೂಲಕ ವಿಶ್ವ ಕ್ರಿಕೆಟ್ನ ಎದುರು ಭಾರಿ ಮುಖಭಂಗ ಎದುರಿಸಿದೆ.
ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಾದರೂ ನಮ್ಮ ತಂಡ ಗೆಲುವು ಸಾಧಿಸಲಿದೆ ಎಂದು ಪಾಕ್ ಅಭಿಮಾನಿಗಳು ತುಂಬಾ ಭರವಸೆ ಇಟ್ಟುಕೊಂಡಿದ್ದರು. ಆದರೆ, ಅದು ನಿರಾಸೆಯಾಗಿದೆ. ಏಕೆಂದರೆ, ಮಳೆಯಿಂದಾಗಿ ಪಂದ್ಯ ರದ್ದಾಗಿದೆ. ಆದಾಗ್ಯೂ, ಪಾಕಿಸ್ತಾನ ತಂಡ ಈ ಟೂರ್ನಿಯಲ್ಲಿ ಕನಿಷ್ಠ 7 ಅಥವಾ 8ನೇ ಸ್ಥಾನ ಪಡೆಯುವ ಸಾಧ್ಯತೆಯಿದೆ. ಆದರೂ, ಪಾಕಿಸ್ತಾನ ಖಾಲಿ ಕೈಯಲ್ಲಿ ಹೋಗುವುದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ಐಸಿಸಿ) ಕೋಟ್ಯಂತರ ರೂಪಾಯಿ ಬಹುಮಾನದ ಹಣವನ್ನು ಪಡೆಯಲಿದೆ.
ಪಾಕಿಸ್ತಾನ ಐಸಿಸಿಯಿಂದ ಸುಮಾರು 2 ಕೋಟಿ 37 ಲಕ್ಷ ರೂಪಾಯಿ ಬಹುಮಾನದ ಹಣವನ್ನು ಪಡೆಯಲಿದೆ. ಈ ಟೂರ್ನಿಯಲ್ಲಿ ಏಳನೇ ಮತ್ತು ಎಂಟನೇ ಸ್ಥಾನದಲ್ಲಿರುವ ತಂಡಗಳಿಗೆ 1.40 ಲಕ್ಷ ಡಾಲರ್, ಅಂದರೆ ಸುಮಾರು 1 ಕೋಟಿ 22 ಲಕ್ಷ ರೂಪಾಯಿ ನೀಡಲಾಗುವುದು. ಹೀಗಾಗಿ ಪಾಕಿಸ್ತಾನ ತಂಡ ಬಹುಮಾನದ ಹಣವನ್ನು ಪಡೆಯಲಿದೆ.
ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅಮೆರಿಕ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಎಲಾನ್ ಮಸ್ಕ್! Elon Musk
ಮತ್ತೊಂದೆಡೆ ಈ ಟೂರ್ನಿಯಲ್ಲಿ ಪಂದ್ಯ ಗೆದ್ದ ತಂಡಕ್ಕೆ ಐಸಿಸಿ ಬಹುಮಾನದ ಹಣವನ್ನು ನೀಡುತ್ತದೆ. ಒಂದು ಪಂದ್ಯ ಗೆದ್ದರೆ, ಐಸಿಸಿ 34000 ಯುಎಸ್ ಡಾಲರ್ (30 ಲಕ್ಷ ರೂಪಾಯಿ) ನೀಡುತ್ತದೆ. ನಿನ್ನೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಪಂದ್ಯದಲ್ಲೂ ಅರ್ಧದಷ್ಟು ಹಣ ಅಂದರೆ, ಸುಮಾರು 15 ಲಕ್ಷ ರೂಪಾಯಿಗಳನ್ನು ಪಾಕಿಸ್ತಾನಕ್ಕೆ ನೀಡಲಾಗುವುದು. ಅದರ ಹೊರತಾಗಿ ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ತಲಾ 1 ಲಕ್ಷ 25 ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ಐಸಿಸಿ ಘೋಷಿಸಿದೆ. ಹೀಗಾಗಿ ಸುಮಾರು 2 ಕೋಟಿ 37 ಲಕ್ಷ ರೂಪಾಯಿವರೆಗೆ ಪಾಕಿಸ್ತಾನ ತಂಡ ಬಹುಮಾನದ ಹಣವನ್ನು ಪಡೆಯಲಿದೆ. ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಯಿಂದ ಪಡೆಯುವ ಹೋಸ್ಟಿಂಗ್ ಶುಲ್ಕವು ಇದಕ್ಕೆ ಹೊರತಾಗಿದೆ.
ಅಂದಹಾಗೆ 1996ರ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ವಿಶ್ವ ಕ್ರಿಕೆಟ್ ಟೂರ್ನಮೆಂಟ್ ಇದಾಗಿದೆ. ಟೂರ್ನಮೆಂಟ್ ಪಂದ್ಯಗಳು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯುತ್ತಿವೆ. ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ. ಈ ವರ್ಷದ ಟೂರ್ನಮೆಂಟ್ ಸ್ವರೂಪದಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಭಾರತ ಮತ್ತು ನ್ಯೂಜಿಲೆಂಡ್ ಗ್ರೂಪ್ ಎ ನಿಂದ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಿರ್ಗಮಿಸಿವೆ. ಇಂಗ್ಲೆಂಡ್ ಗ್ರೂಪ್ ಬಿ ನಿಂದ ನಿರ್ಗಮಿಸಿದ್ದು, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಪ್ರಸ್ತುತ ಸೆಮಿಫೈನಲ್‌ಗಾಗಿ ಪೈಪೋಟಿಯಲ್ಲಿವೆ. (ಏಜೆನ್ಸೀಸ್)