ಕ್ರೀಡೆ

ವಿಶ್ವಕಪ್​ನಲ್ಲಿ ಮಿಂಚುತ್ತಿರುವ ಕನ್ನಡಿಗ ರಚಿನ್ ರವೀಂದ್ರ​ಗೆ ಐಸಿಸಿ ಮಾಸಿಕ ಆಟಗಾರ ಪ್ರಶಸ್ತಿ

ಬೆಂಗಳೂರು: ಏಕದಿನ ವಿಶ್ವಕಪ್​ನಲ್ಲಿ ಮಿಂಚುತ್ತಿರುವ ರಚಿನ್​ ರವೀಂದ್ರ ಅಕ್ಟೋಬರ್​ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಭಾರತದ ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್​ ಡಿಕಾಕ್​ರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಅಕ್ಟೋಬರ್​ನಲ್ಲಿ ಆಡಿದ 6 ವಿಶ್ವಕಪ್​ ಪಂದ್ಯಗಳಲ್ಲಿ ರಚಿನ್​ 406 ರನ್​ ಬಾರಿಸಿದ್ದರು.

ರಚಿನ್​ಗೆ ಬೆಂಗಳೂರಿನಲ್ಲಿ ಇನ್ನಷ್ಟು ಆಡುವಾಸೆ

ಏಕದಿನ ವಿಶ್ವಕಪ್​ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ 2 ಪಂದ್ಯಗಳಲ್ಲಿ ಶತಕ ಮತ್ತು ಉಪಯುಕ್ತ 42 ರನ್​ ಸಿಡಿಸಿ ಮಿಂಚಿರುವ ಬೆಂಗಳೂರು ಮೂಲದ ಕಿವೀಸ್​ ಆಲ್ರೌಂಡರ್​ ರಚಿನ್​ ರವೀಂದ್ರ, ತವರೂರಿನ ಮೈದಾನದಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಆಸೆಯನ್ನು ಪರೋಕ್ಷ$ವಾಗಿ ವ್ಯಕ್ತಪಡಿಸಿದ್ದಾರೆ ಎಂದು ಕ್ರಿಕೆಟ್​ ಪ್ರೇಮಿಗಳು ವ್ಯಾಖ್ಯಾನಿಸುತ್ತಿದ್ದಾರೆ.

"ಬೆಂಗಳೂರು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಭವಿಷ್ಯದಲ್ಲಿ ಇಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡುವ ಭರವಸೆ ಇದೆ' ಎಂದಿರುವ 24 ವರ್ಷದ ರಚಿನ್​, ಬೆಂಗಳೂರಿನ ಪ್ರೇಕ್ಷಕರು ತನಗೆ ನೀಡಿದ ಅಪಾರ ಬೆಂಬಲಕ್ಕೂ ಧನ್ಯವಾದ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕ್ಲಬ್​ ಕ್ರಿಕೆಟ್​ನಲ್ಲಿ ಆಡಿದ್ದ ರಚಿನ್​ ಅವರ ತಂದೆ ರವಿ ಕೃಷ್ಣಮೂರ್ತಿ ಹಲವು ವರ್ಷಗಳ ಹಿಂದೆಯೇ ನ್ಯೂಜಿಲೆಂಡ್​ಗೆ ವಲಸೆ ಹೋಗಿದ್ದರು.