ಕ್ರೀಡೆ

ಇಂದಿನಿಂದ ಐಸಿಸಿ ಸಭೆ; ಬಿಸಿಸಿಐನಿಂದ ಏಷ್ಯಾಕಪ್​ ಟ್ರೋಫಿ ವಿವಾದ ಪ್ರಸ್ತಾಪ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ನ (ಐಸಿಸಿ) ಮಹತ್ವದ ಸಭೆ ಮಂಗಳವಾರದಿಂದ 4 ದಿನಗಳ ಕಾಲ ದುಬೈನಲ್ಲಿ ನಡೆಯಲಿದ್ದು, ಏಷ್ಯಾಕಪ್​ ಟ್ರೋಫಿ ವಿವಾದವನ್ನು ಪ್ರಸ್ತಾಪಿಸಲು ಬಿಸಿಸಿಐ ಸಿದ್ಧಗೊಂಡಿದೆ. ವಿಜೇತ ಭಾರತ ತಂಡಕ್ಕೆ ಟ್ರೋಫಿಯನ್ನು ವಿತರಿಸಲು ಅವಕಾಶ ನೀಡದೆ ಹರಸ್ಯ ಸ್ಥಳದಲ್ಲಿ ಬಚ್ಚಿಟ್ಟಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹಾಗೂ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಅಧ್ಯಕ್ಷ ಮೊಹ್ಸಿನ್​ ನಖ್ವಿ ವಿರುದ್ಧ ಬಿಸಿಸಿಐ ತನ್ನ ಪ್ರತಿಭಟನೆಯನ್ನು ಐಸಿಸಿ ಎದುರು ನಡೆಸಲಿದೆ.

ಮಹಿಳೆಯರ ಏಕದಿನ ವಿಶ್ವಕಪ್​ ಗೆಲುವಿನ ಬಳಿಕ ಏಷ್ಯಾಕಪ್​ ಟ್ರೋಫಿ ವಿಚಾರವನ್ನು ಪ್ರಸ್ತಾಪಿಸಿ ಮೊಹ್ಸಿನ್​ ನಖ್ವಿಗೆ ಟಾಂಗ್​ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್​ ಸೈಕಿಯಾ, "ಗೆಲುವಿನ ಬಳಿಕ ನಮ್ಮ ಮಹಿಳಾ ತಂಡ ಕೂಡಲೆ ಟ್ರೋಫಿಯನ್ನು ಪಡೆಯಿತು. ಆದರೆ ನಮ್ಮ ಪುರುಷರ ತಂಡ ದುಬೈನಲ್ಲಿ ಏಷ್ಯಾಕಪ್​ ಗೆದ್ದು ಇಷ್ಟು ದಿನಗಳಾದರೂ ಇನ್ನೂ ಟ್ರೋಫಿ ಪಡೆದಿಲ್ಲ. ಅದು ಇನ್ನೂ ಮುಂಬೈನ ಬಿಸಿಸಿಐ ಮುಖ್ಯ ಕಚೇರಿಗೂ ಬಂದಿಲ್ಲ' ಎಂದಿದ್ದಾರೆ.

ಏಷ್ಯಾಕಪ್​ ಟ್ರೋಫಿ ಹಸ್ತಾಂತರಿಸಬೇಕೆಂದು ಬಿಸಿಸಿಐ 10 ದಿನಗಳ ಹಿಂದೆಯೇ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ಗೆ ಪತ್ರ ಬರೆದಿತ್ತು. ಆದರೆ ಅದು ಇನ್ನೂ ಬಾರದಿರುವುದರಿಂದ ನಾವು ಐಸಿಸಿ ಮೊರೆ ಹೋಗುವುದು ಅನಿವಾರ್ಯವಾಗಿದೆ. ಐಸಿಸಿ ನಮಗೆ ನ್ಯಾಯ ಒದಗಿಸಿ, ಟ್ರೋಫಿ ಪಡೆಯಲು ನೆರವಾಗುವ ಭರವಸೆ ಇದೆ ಎಂದು ಸೈಕಿಯಾ ತಿಳಿಸಿದ್ದಾರೆ. ಮೊಹ್ಸಿನ್​ ನಖ್ವಿ ಪಾಕ್​ ಸರ್ಕಾರದ ಪ್ರಭಾವಿ ಸಚಿವರೂ ಆಗಿದ್ದು, ಅವರ ಭಾರತ ವಿರೋಧಿ ಹೇಳಿಕೆಗಳಿಂದಾಗಿ, ಸೂರ್ಯಕುಮಾರ್​ ಪಡೆ ಅವರ ಕೈಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಆದರೆ ಬೇರೆ ಅತಿಥಿಗಳಿಂದ ಟ್ರೋಫಿ ಸ್ವೀಕರಿಸಲು ಸಿದ್ಧವಿತ್ತು. ಆಗ ನಖ್ವಿ ಟ್ರೋಫಿಯೊಂದಿಗೆ ಸ್ಟೇಡಿಯಂನಿಂದ ಪಲಾಯನ ಮಾಡಿದ್ದರು.