ದುಬೈ: ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ "ಮಿನಿ ವಿಶ್ವಕಪ್' ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯ ಭವಿಷ್ಯವನ್ನು ನಿರ್ಧರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಆಡಳಿತ ಮಂಡಳಿ ಶುಕ್ರವಾರ ವರ್ಚುವಲ್ ಮೂಲಕ ಮಹತ್ವದ ಸಭೆ ನಡೆಸಲಿದೆ. ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಭಾರತ ನಿರಾಕರಿಸಿರುವುದರಿಂದ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಒಲವು ತೋರುವ ನಿರೀಕ್ಷೆ ಇದೆ.
2025ರ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿ ಪಾಕಿಸ್ತಾನದಲ್ಲಿ ನಿಗದಿಯಾಗಿದೆ. 8 ತಂಡಗಳು ಭಾಗವಹಿಸಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಬೇಕಿದೆ. ಆದರೆ ಭದ್ರತಾ ಭೀತಿಯಿಂದಾಗಿ ಭಾರತ ತಂಡವನ್ನು ಪಾಕ್ಗೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ವಿಷಯವನ್ನು ಬಿಸಿಸಿಐ ತಿಳಿಸಿದ ಬೆನ್ನಲ್ಲೇ ಐಸಿಸಿ, ಹೈಬ್ರಿಡ್ ಮಾದರಿಯಲ್ಲಿ (ಭಾರತದ ಪಂದ್ಯಗಳು ಪಾಕ್ನಿಂದ ಹೊರಗೆ ಆಯೋಜನೆ) ಟೂರ್ನಿ ನಡೆಸಲು ಐಸಿಸಿ ಪ್ರಯತ್ನಿಸಿದರೂ, ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದನ್ನು ತಿರಸ್ಕರಿಸಿದೆ. ಇದರಿಂದಾಗಿ ಟೂರ್ನಿ ಆಯೋಜನೆಗೆ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ 100ಕ್ಕಿಂತ ಕಡಿಮೆ ದಿನಗಳು ಬಾಕಿ ಉಳಿದಿದ್ದರೂ, ಟೂರ್ನಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
"ಹಾಲಿ ಸನ್ನಿವೇಶದಲ್ಲಿ ಹೈಬ್ರಿಡ್ ಮಾದರಿಯೇ ಅತ್ಯುತ್ತಮ ಆಯ್ಕೆಯಾಗಿದೆ. ಟೂರ್ನಿಯ ಹಿತದೃಷ್ಟಿಯಿಂದ ಇದಕ್ಕೆ ಸಂಬಂಧಿಸಿದವರು ಜಾಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಭಾರತ ಅಥವಾ ಪಾಕಿಸ್ತಾನ ತಂಡಗಳು ಇಲ್ಲದೆ ಆಡುವುದು ಟೂರ್ನಿಗೆ ಉತ್ತಮವಾದುದಲ್ಲ' ಎಂದು ಐಸಿಸಿ ಮೂಲಗಳು ತಿಳಿಸಿವೆ.
2008ರ ಮುಂಬೈ ಉಗ್ರ ದಾಳಿ ಬಳಿಕ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಈ ಬಾರಿಯೂ ಭದ್ರತಾ ಭೀತಿಯಿಂದ ಭಾರತ ತಂಡವನ್ನು ಪಾಕ್ಗೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಪಾಕ್ನಲ್ಲಿ ನಿಗದಿಯಾಗಿರುವ ಅಂಧರ ಟಿ20 ವಿಶ್ವಕಪ್ಗೂ ಭಾರತ ತಂಡವನ್ನು ಕಳುಹಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ.
ಭಾರತ-ಪಾಕ್ ಬಿಟ್ಟು ಟೂರ್ನಿ ಇಲ್ಲ...
ಭಾರತ ಬಾರದಿದ್ದರೂ ಟೂರ್ನಿ ನಡೆಸಬೇಕೆಂದು ಪಿಸಿಬಿ ಬಯಸಿದ್ದರೂ, ಭಾರತವನ್ನು ಬಿಟ್ಟು ಟೂರ್ನಿ ನಡೆಸಲು ಐಸಿಸಿ ಸಿದ್ಧವಿಲ್ಲ. ಜತೆಗೆ ಟೂರ್ನಿಯ ಆಕರ್ಷಣೆ-ಮಹತ್ವ ಉಳಿಸಿಕೊಳ್ಳಲು ಭಾರತ-ಪಾಕಿಸ್ತಾನ ಪಂದ್ಯ ಆಯೋಜನೆಯೂ ಅಗತ್ಯವಾಗಿದೆ. ಆರ್ಥಿಕ ಹಿತದೃಷ್ಟಿಯಿಂದಲೂ ಇಂಡೋ&ಪಾಕ್ ಪಂದ್ಯ ಮಹತ್ವ ಪಡೆದಿದೆ. ಭಾರತ&ಪಾಕಿಸ್ತಾನ ತಂಡಗಳನ್ನು ಪ್ರತ್ಯೇಕ ಗುಂಪುಗಳಲ್ಲಿ ಆಡಿಸಲು ಟೂರ್ನಿಯ ನೇರಪ್ರಸಾರ ಹಕ್ಕು ಹೊಂದಿರುವ ಕಂಪನಿ ಒಪ್ಪುವುದಿಲ್ಲ. ಆರ್ಥಿಕ ಲಾಭಕ್ಕಾಗಿ ಭಾರತ-ಪಾಕ್ ಪಂದ್ಯ ಅಗತ್ಯವಾಗಿದೆ. ನಾಕೌಟ್ನಲ್ಲಿ ಮತ್ತೆ ಉಭಯ ತಂಡಗಳು ಮುಖಾಮುಖಿ ಆದರೆ ಅದು ಬೋನಸ್ ಆಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಐಸಿಸಿ ಮುಂದಿರುವ ಮೂರು ಆಯ್ಕೆಗಳು
1. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಪಾಕಿಸ್ತಾನವನ್ನು ಒಪ್ಪಿಸುವುದು.
2. ಸಂಪೂರ್ಣ ಟೂರ್ನಿಯನ್ನು ಯುಎಇ ಅಥವಾ ದ. ಆಫ್ರಿಕಾಕ್ಕೆ ಸ್ಥಳಾಂತರಿಸುವುದು.
3. ಕೊನೆಯ ಆಯ್ಕೆಯಾಗಿ ಟೂರ್ನಿ ರದ್ದು ಅಥವಾ ಅನಿರ್ದಿಷ್ಟಾವಧಿಗೆ ಮುಂದೂಡುವುದು.
ಪ್ರಸಾರ ವಾಹಿನಿಯಿಂದ ಒತ್ತಡ
ಚಾಂಪಿಯನ್ಸ್ ಟ್ರೋಫಿಯ ನೇರಪ್ರಸಾರ ಹಕ್ಕು ಹೊಂದಿರುವ "ಜಿಯೋ ಸ್ಟಾರ್' ಸಂಸ್ಥೆ, ಟೂರ್ನಿಯ ವೇಳಾಪಟ್ಟಿ ವಿಳಂಬದ ಬಗ್ಗೆ ಅಸಮಾಧಾನಗೊಂಡಿದೆ ಮತ್ತು ಟೂರ್ನಿ ಆಯೋಜನೆಗೆ ಸಂಬಂಧಿಸಿದ ಬಿಕ್ಕಟ್ಟು ಬೇಗನೆ ಬಗೆಹರಿಸಬೇಕೆಂದು ಐಸಿಸಿ ಮೇಲೆ ಒತ್ತಡ ಹೇರಿದೆ. ಐಸಿಸಿ&ಜಿಯೋ ಸ್ಟಾರ್ ಒಪ್ಪಂದದ ಪ್ರಕಾರ, ಟೂರ್ನಿಯ ವೇಳಾಪಟ್ಟಿಯನ್ನು ಕನಿಷ್ಠ 90 ದಿನ ಮುನ್ನವಾದರೂ ಬಿಡುಗಡೆಗೊಳಿಸಬೇಕು. ಆದರೆ ಐಸಿಸಿ ಈಗಾಗಲೆ ಈ ನಿಯಮಾವಳಿಯನ್ನು ಉಲ್ಲಂಘಿಸಿದೆ.
ಲಂಕಾ ಎ ಪ್ರವಾಸ ರದ್ದು ಹೊಡೆತ
ಇಸ್ಲಾಮಾಬಾದ್ನಲ್ಲಿ ತೀವ್ರ ರಾಜಕೀಯ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಶ್ರೀಲಂಕಾ ಎ ತಂಡ ಪಾಕಿಸ್ತಾನ ಪ್ರವಾಸವನ್ನು ಮುಂದೂಡಿತ್ತು. ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದು, ತೀವ್ರ ಹಿಂಸಾಚಾರಕ್ಕೂ ಕಾರಣವಾಗಿದೆ. ಇದು ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೂ ಹಿನ್ನಡೆ ತರುವ ಸಾಧ್ಯತೆ ಇದೆ.
ಸ್ಥಳಾಂತರ ಆಯ್ಕೆಯೂ ಇದೆ
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಪಿಸಿಬಿ ಖಡಾಖಂಡಿತವಾಗಿ ನಿರಾಕರಿಸಿದರೆ, ಬೇರೆಡೆಗೆ ಸ್ಥಳಾಂತರಿಸುವ ಆಯ್ಕೆಯೂ ಐಸಿಸಿ ಮುಂದಿದೆ. ಈ ನಿಟ್ಟಿನಲ್ಲಿ ಯುಎಇ ಮತ್ತು ದ. ಆಫ್ರಿಕಾ ಸದ್ಯಕ್ಕೆ ಬದಲಿ ತಾಣವಾಗಿ ಮುಂಚೂಣಿಯಲ್ಲಿವೆ.
ಬಹಿಷ್ಕರಿಸುವುದೇ ಪಾಕ್?
ಹೈಬ್ರಿಡ್ ಮಾದರಿಗೆ ಪಾಕ್ ಒಪ್ಪದಿದ್ದಾಗ ಐಸಿಸಿ, ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರಕ್ಕೆ ಮುಂದಾಗಬಹುದು. ಆಗ ಪಾಕ್ ಕ್ರಿಕೆಟ್ ಮಂಡಳಿ, ಟೂರ್ನಿಯನ್ನೇ ಬಹಿಷ್ಕರಿಸಿ ತನ್ನ ಆಕ್ರೋಶ ಪ್ರದರ್ಶಿಸುವ ಸಾಧ್ಯತೆಯೂ ಇದೆ. ಆದರೆ ಪಿಸಿಬಿಯ ಹಾಲಿ ಆರ್ಥಿಕ ದು@ಸ್ಥಿತಿಯಲ್ಲಿ ಈ ಆಯ್ಕೆ ಅದಕ್ಕೆ ದುಬಾರಿಯಾಗಿ ಪರಿಣಮಿಸಬಹುದು. ಅಲ್ಲದೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಳಿಂದಲೂ ಹಿಂದೆ ಸರಿಯಲು ಪಿಸಿಬಿ ಚಿಂತಿಸಬಹುದು. ಭಾರತದಲ್ಲಿ 2025ರ ಮಹಿಳೆಯರ ಏಕದಿನ ವಿಶ್ವಕಪ್, 2026ರ ಟಿ20 ವಿಶ್ವಕಪ್, 2029ರ ಚಾಂಪಿಯನ್ಸ್ ಟ್ರೋಫಿ, 2031ರ ಏಕದಿನ ವಿಶ್ವಕಪ್ ನಿಗದಿಯಾಗಿವೆ.
ಏನಿದು ಹೈಬ್ರಿಡ್ ಮಾದರಿ?
ಹೈಬ್ರಿಡ್ ಮಾದರಿಯ ಅನ್ವಯ ಚಾಂಪಿಯನ್ಸ್ ಟ್ರೋಫಿ 15 ಪಂದ್ಯಗಳ ಪೈಕಿ 10 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಮತ್ತು ಸೆಮಿಫೈನಲ್-ಫೈನಲ್ ಸಹಿತ ಇತರ 5 ಪಂದ್ಯಗಳನ್ನು ಬೇರೆಡೆ ನಡೆಸುವುದು ಐಸಿಸಿ ಯೋಜನೆಯಾಗಿದೆ. ಇದರನ್ವಯ ಭಾರತ ತಂಡದ ಎಲ್ಲ ಲೀಗ್ ಪಂದ್ಯಗಳೂ ಪಾಕ್ನಿಂದ ಹೊರಗೆ ಆಯೋಜನೆಗೊಳ್ಳಲಿವೆ. ಕಳೆದ ವರ್ಷ ಏಷ್ಯಾಕಪ್ ಟೂರ್ನಿಯ ವೇಳೆಯೂ ಇದೇ ಮಾದರಿಯನ್ನು ಅನುಸರಿಸಿ, ಭಾರತದ ಪಂದ್ಯ ಮತ್ತು ನಾಕೌಟ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಿ, ಇತರ ಪಂದ್ಯಗಳನ್ನಷ್ಟೇ ಪಾಕ್ನಲ್ಲಿ ಆಯೋಜಿಸಲಾಗಿತ್ತು.