ದುಬೈ: ಐಸಿಸಿಯ ಮಂಡಳಿ ಸಭೆ ಮಂಗಳವಾರ ವರ್ಚುವಲ್ ಮೂಲಕ ನಡೆಯಲಿದೆ. ಟಿ20 ವಿಶ್ವಕಪ್ ಆತಿಥ್ಯ ಉಳಿಸಿಕೊಳ್ಳುವ ಬಗ್ಗೆ ಬಿಸಿಸಿಐ ಒಂದು ತಿಂಗಳು ಸಮಯ ಕೇಳಲಿರುವ ಕಾರಣದಿಂದಾಗಿ, ಟೂರ್ನಿಯ ಸ್ಥಳಾಂತರದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅನುಮಾನವೆನಿಸಿದೆ. ಇದಲ್ಲದೆ, 2023-31ರ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಸಹಿತ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಕಳೆದ ಭಾನುವಾರ ನಡೆದ ಬಿಸಿಸಿಐ ಎಸ್‌ಜಿಎಂನಲ್ಲಿ ಟಿ20 ವಿಶ್ವಕಪ್ ಆತಿಥ್ಯವನ್ನು ನಿರ್ಧರಿಸಲು ಒಂದು ತಿಂಗಳ ಸಮಯ ಕೇಳಲು ನಿರ್ಧರಿಸಲಾಗಿದೆ. ಹೀಗಾಗಿ ಐಸಿಸಿ, ಜುಲೈ 18ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯವರೆಗೆ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವನ್ನು ಕಾಯ್ದಿರಿಸುವ ನಿರೀಕ್ಷೆ ಇದೆ.
ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಈಗಾಗಲೆ ಯುಎಇಗೆ ಸ್ಥಳಾಂತರಿಸಿದ್ದರೂ, ಟಿ20 ವಿಶ್ವಕಪ್ ಆತಿಥ್ಯ ಕೈತಪ್ಪದಂತೆ ಪ್ರಯತ್ನಿಸಲು ಬಿಸಿಸಿಐ ಬಯಸಿದೆ. ಸದ್ಯ ದೇಶದಲ್ಲಿ ಕರೊನಾ ಪ್ರಕರಣಗಳು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಆದರೂ ಕೇಂದ್ರ ಸರ್ಕಾರದ ಜತೆಗೆ ಚರ್ಚಿಸಿಯೇ ಟಿ20 ವಿಶ್ವಕಪ್ ಆತಿಥ್ಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆದರೆ ಟಿ20 ವಿಶ್ವಕಪ್ ಭಾರತದಲ್ಲೇ ನಡೆದರೂ, ಈ ಹಿಂದಿನ ಯೋಜನೆಯಂತೆ 9 ನಗರಗಳಲ್ಲಿ ಪಂದ್ಯ ಆಯೋಜಿಸುವ ಬದಲು 3 ಕ್ರೀಡಾಂಗಣಗಳನ್ನು ಒಳಗೊಂಡ ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ಪಂದ್ಯಗಳು ನಡೆಯಲಿದ್ದು, ಅಹಮದಾಬಾದ್‌ನಲ್ಲಿ ಫೈನಲ್ ನಡೆಯಬಹುದು. ಆದರೆ ಪಾಕಿಸ್ತಾನ ತಂಡಕ್ಕೆ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಆಡಲು ಅವಕಾಶ ಲಭಿಸಬಹುದೇ ಎಂಬ ಪ್ರಶ್ನೆಯೂ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸಭೆಗೆ ಗಂಗೂಲಿ ಹೋಗಲ್ಲ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ತೆರಳಿ ಐಸಿಸಿ ಸಭೆಯಲ್ಲಿ ಖುದ್ದಾಗಿ ಹಾಜರಾಗುವರು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಗಂಗೂಲಿ ಭಾರತದಿಂದಲೇ ವರ್ಚುವಲ್ ಮೂಲಕವೇ ಪಾಲ್ಗೊಳ್ಳಲಿದ್ದಾರೆ. ಆದರೆ ಬುಧವಾರ ಯುಎಇಗೆ ಪ್ರಯಾಣಿಸಲಿದ್ದು, ಐಪಿಎಲ್ ಆಯೋಜನೆಯ ಬಗ್ಗೆ ಆತಿಥೇಯ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಜತೆಗೆ ಚರ್ಚಿಸಲಿದ್ದಾರೆ. ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಖಜಾಂಚಿ ಅರುಣ್ ಧುಮಾಲ್, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಕೂಡ ತೆರಳಲಿದ್ದಾರೆ ಎನ್ನಲಾಗಿದೆ.
ಎಫ್ಟಿಪಿ ವೇಳಾಪಟ್ಟಿ ಚರ್ಚೆ
ಐಸಿಸಿ ಟೂರ್ನಿಗಳು ಮತ್ತು ದ್ವಿಪಕ್ಷೀಯ ಸರಣಿಗಳನ್ನು ಒಳಗೊಂಡ ಮುಂಬರುವ 8 ವರ್ಷಗಳ ವೇಳಾಪಟ್ಟಿ ಅಂದರೆ 2023ರಿಂದ 2031ರವರೆಗಿನ ಫ್ಯೂಚರ್ಸ್ ಟೂರ್ ಪ್ರೋಗ್ರಾಂ (ಎಫ್ಟಿಪಿ) ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಲವು ದೇಶಗಳ ಕ್ರಿಕೆಟ್ ಮಂಡಳಿಗಳು ಹೆಚ್ಚಿನ ಸರಣಿಗಳ ಆತಿಥ್ಯಕ್ಕಾಗಿ ಪ್ರಯತ್ನಿಸಲಿವೆ. ಮೊದಲ ಆವೃತ್ತಿಯಲ್ಲಿ ಕರೊನಾದಿಂದಾಗಿ ಸಾಕಷ್ಟು ಅಡಚಣೆ ಎದುರಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮುಂದಿನ ಆವೃತ್ತಿಯ ಭವಿಷ್ಯದ ಬಗ್ಗೆಯೂ ಚರ್ಚೆಯಾಗಲಿದೆ.