ಕ್ರೀಡೆ

ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಪುರುಷ-ಮಹಿಳಾ ತಂಡಕ್ಕೆ ಸಮಾನ ಬಹುಮಾನ

ನವದೆಹಲಿ: ಐಸಿಸಿ ಆಯೋಜಿಸುವ ಈವೆಂಟ್​ಗಳಲ್ಲಿ ಭಾಗವಹಿಸುವ ಪುರುಷ-ಮಹಿಳಾ ತಂಡಗಳಿಗೆ ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​(ICC) ಸಮಾನ ಬಹುಮಾನವನ್ನು ಘೋಷಿಸಿದೆ.

ದಕ್ಷಿಣ ಆಫ್ರಿಕಾದ ಡರ್ಬನ್​ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಐಸಿಸಿ ಟೂರ್ನಿಗಳಲ್ಲಿ ಪುರುಷರ ತಂಡಗಳು ಪಡೆದಷ್ಟೇ ಸ್ಥಾನವನ್ನು ಮಹಿಳಾ ತಂಡ ಪಡೆದಲ್ಲಿ ಅವರಿಗೆ ಸಮಾನ ಬಹುಮಾನ ಮೊತ್ತ ಸಿಗಲಿದೆ.

ಕ್ರಿಕೆಟ್ ಎಲ್ಲರಿಗೂ ನಿಜವಾದ ಕ್ರೀಡೆಯಾಗಿದೆ ಮತ್ತು ಐಸಿಸಿ ಮಂಡಳಿಯ ಈ ನಿರ್ಧಾರವು ಇದನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಆಟಕ್ಕೆ ಪ್ರತಿಯೊಬ್ಬ ಆಟಗಾರನ ಕೊಡುಗೆಯನ್ನು ಸಮಾನವಾಗಿ ಆಚರಿಸಲು ಮತ್ತು ಮೌಲ್ಯೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಐಸಿಸಿ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಐಸಿಸಿ ಚೇರ್​ಮನ್​ ಇದು ಕ್ರೀಡಾ ಇತಿಹಾಸದಲ್ಲೇ ಮಹತ್ವದ ಕ್ಷಣವಾಗಿದೆ. ಐಸಿಸಿ ನಡೆಸುವ ಜಾಗತಿಕ ಈವೆಂಟ್‌ಗಳಲ್ಲಿ ಸ್ಪರ್ಧಿಸುವ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಈಗ ಸಮಾನವಾಗಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.