ಕ್ರೀಡೆ

ಮಾನಸಿಕವಾಗಿ ಸಿದ್ಧನಿದ್ದೆ ಆದ್ರೆ…. ಒಲಿಂಪಿಕ್ಸ್​ನಲ್ಲಿನ ಪ್ರದರ್ಶನದ ಕುರಿತು ನೀರಜ್​ ಚೋಪ್ರಾ ಹೇಳಿದಿಷ್ಟು

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ 89.45 ಮೀಟರ್ ಎಸೆಯುವ ಮೂಲಕ ಭಾರತದ ನೀರಜ್​ ಚೋಪ್ರಾ​ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿರು. ಪಾಕಿಸ್ತಾನದ ಅಥ್ಲೀಟ್​​ ಅರ್ಷದ್ ನದೀಮ್‌ 92.97 ಮೀ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ​

ಇತ್ತೀಚಿಗಿನ ಸಂದರ್ಶವೊಂದರಲ್ಲಿ ಒಲಿಂಪಿಕ್ಸ್​​​ನ ತಮ್ಮ ಆಟದ ಬಗ್ಗೆ ನೀರಜ್​ ಚೋಪ್ರಾ ಮಾತನಾಡಿ, ನಾನು ಮಾನಸಿಕವಾಗಿ ಸಿದ್ಧವಾಗಿದ್ದರೂ ದೈಹಿಕವಾಗಿ ಸ್ವಲ್ಪ ತೊಂದರೆಗೊಳಗಾಗಿದ್ದೆ ಎಂದು ಹೇಳಿದ್ದಾರೆ. ನಾನು ಕಾಲ್​ ರೂಮ್​ಗೆ ಹೋಗುವ ಐದು ನಿಮಿಷಗಳ ಮೊದಲ ನನ್ನ ಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಆದರೂ ಸ್ಪರ್ಧೆಗೆ ಇಳಿದೆ. ಆಟದಲ್ಲಿನ ನನ್ನ ಎದುರಾಳಿಗಳು ಜಾವೆಲಿನ್​ ಅನ್ನು ಎಷ್ಟು ದೂರ ಎಸೆದರು ಎಂದು ನನ್ನ ಸುತ್ತಮುತ್ತಲಿನ ಜನರು ಕಾಮೆಂಟ್​ ಮಾಡುತ್ತಿದ್ದರು. ಆ ವೇಳೆ ನಾನು ಮಾನಸಿಕವಾಗಿ ದೃಢವಾಗಿದ್ದೆ, ಯಾವುದೆ ಒತ್ತಡಕ್ಕೆ ಒಳಗಾಗಿರಲಿಲ್ಲ. ನಾನು ಅದನ್ನು ಮೀರಿ ದೂರಕ್ಕೆ ಜಾವೆಲಿನ್​ ಎಸೆಯಬೇಕು ಎಂದು ನಿರ್ಧರಿಸಿದೆ. ಆದರೆ ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ನನ್ನ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಇನ್ನು ಎದುರಾಳಿ ಅರ್ಷದ್​ ನದೀಮ್​ ಬಗ್ಗೆ ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ಗುರಿ ತಲುಪಲು ಕಷ್ಟಪಟ್ಟು ಅಭ್ಯಾಸ ಮಾಡುತ್ತಾರೆ. ನದೀಮ್​ ಅವರ ದೈಹಿಕ ಸಾಮರ್ಥಗಳ ಮೇಲಿನ ವಿಶ್ವಾಸ, ಅವರಿಗೆ ಸಿಕ್ಕ ಬೆಂಬಲ ಮತ್ತು ತರಬೇತಿಯಿಂದಾಗಿ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಇದೇ ವೇಳೆ ಆಗಸ್ಟ್​​ 22ರಂದು ಪ್ರಾರಂಭವಾಗಲಿರುವ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸುವುದಾಗಿ ತಮ್ಮ ಮುಂದಿನ ಸ್ಪರ್ಧೆಯನ್ನು ಬಹಿರಂಗಪಡಿಸಿದರು.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಿದ್ದ ಗಾಯವನ್ನು ನೆನಪಿಸಿಕೊಂಡು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಚಿಕಿತ್ಸೆ ಪಡೆದಿದ್ದೇನೆ ಹಾಗೂ ಮನೆಯಲ್ಲಿ ಸ್ವಲ್ಪ ಸಮಯ ವಿಶ್ರಮಿಸಿರುವುದಾಗಿ ಹೇಳಿದರು. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಈ ಬಾರಿ ನೀರಜ್​ ಚೋಪ್ರಾ 89.45 ಮೀ. ಜಾವೆಲಿನ್​ ಎಸೆಯುವ ಮೂಲಕ ತಮ್ಮ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಒಲಿಂಪಿಕ್ಸ್​ನಲ್ಲಿ ​ನೀರಜ್​ 87.58 ಮೀ. ಜಾವೆಲಿನ್ ಎಸೆದು ಚಿನ್ನದ ಪದಕ ಗೆದಿದ್ದರು.(ಏಜೆನ್ಸೀಸ್​)