ಕ್ರೀಡೆ

ವಿರಾಟ್​​ ಕೊಹ್ಲಿಯಂತಹ ಆಟಗಾರನನ್ನು ನಾನು ಇದುವರೆಗೂ ನೋಡೇ ಇಲ್ಲ! ದಿಗ್ಗಜ ಕ್ರಿಕೆಟಿಗನಿಂದ ಬಹುಪರಾಕ್​ | Virat Kohli

Virat Kohli : ಫೆ.23ರಂದು ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿಗೆ ಪ್ರಮುಖ ಕಾರಣ, ದಾಖಲೆಗಳ ಸರದಾರ, ರನ್​ ಮೆಷಿನ್​ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಖ್ಯಾತಿ ಗಳಿಸಿರುವ ವಿರಾಟ್​ ಕೊಹ್ಲಿ. ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನದೊಂದಿಗೆ ಶತಕ ಬಾರಿಸಿ, ಗೆಲುವು ತಂದುಕೊಟ್ಟರು. ಅಲ್ಲದೆ, ಮತ್ತೆ ಫಾರ್ಮ್​ಗೆ ಮರಳಿದರು. ಅದರಲ್ಲೂ ಪಾಕಿಸ್ತಾನ ವಿರುದ್ಧ ಯಾರೇ ಆಡದಿರಲಿ ಕೊಹ್ಲಿ ಮಾತ್ರ ಆಡೇ ಆಡುತ್ತಾರೆ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದರು. 242 ರನ್‌ಗಳ ಚೇಸಿಂಗ್‌ನಲ್ಲಿ ಕೊನೆಯವರೆಗೂ ಕ್ರೀಸ್‌ನಲ್ಲಿದ್ದ ಕೊಹ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ಅವರಿಗಿಂತ ಉತ್ತಮ ಚೇಸ್ ಮಾಸ್ಟರ್ ಇಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು.

ಭಾರತದ ಗೆಲುವಿನಲ್ಲಿ ಕಿಂಗ್ ಕೊಹ್ಲಿ ನಿಖರವಾಗಿ 100 ರನ್ ಗಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದರು. ಇದು ಕೊಹ್ಲಿ ಅವರ 51ನೇ ಏಕದಿನ ಶತಕವಾಗಿದೆ. ಪಂದ್ಯ ನಡೆದ ಮೂರು ದಿನಗಳ ನಂತರವೂ ಕೊಹ್ಲಿಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್.

ನಾನು ವಿರಾಟ್ ಕೊಹ್ಲಿಗಿಂತ ಉತ್ತಮ ಆಟಗಾರನನ್ನು ಏಕದಿನ ಪಂದ್ಯಗಳಲ್ಲಿ ಇದುವರೆಗೂ ನೋಡಿಲ್ಲ. ಅವರೀಗ ನನ್ನನ್ನೂ ಮೀರಿಸಿದ್ದಾರೆ (ಅತಿ ಹೆಚ್ಚು ಏಕದಿನ ರನ್ ಗಳಿಸಿದವರ ಪಟ್ಟಿಯಲ್ಲಿ). ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿಗಿಂತ ಇಬ್ಬರು ಬ್ಯಾಟ್ಸ್‌ಮನ್‌ಗಳು (ಸಚಿನ್​ ಮತ್ತು ಕುಮಾರ್​ ಸಂಗಕ್ಕರ) ಮಾತ್ರ ಸದ್ಯಕ್ಕೆ ಮುಂದಿದ್ದಾರೆ. ಹೀಗಾಗಿ ಕೊಹ್ಲಿ, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಬಯಸಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕೊಹ್ಲಿ ಎಂದಿನಂತೆಯೇ ಫಿಟ್ ಆಗಿದ್ದಾರೆ. ಭವಿಷ್ಯದಲ್ಲಿಯೂ ಅವರು ಈ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರಿಕ್ಕಿ ಪಾಂಟಿಂಗ್​ ತಿಳಿಸಿದರು.

ಕೊಹ್ಲಿ ಅವರು ಕಷ್ಟಪಟ್ಟು ದುಡಿಯುವ ಮನಸ್ಥಿತಿ ಹೊಂದಿದ್ದಾರೆ. ಅವರು ಇನ್ನೂ ಸಚಿನ್ ಗಿಂತ 4,000 ರನ್​ಗಳ ಹಿಂದೆ ಇದ್ದಾರೆ. ಕೊಹ್ಲಿಗೆ ಸಚಿನ್ ಅವರನ್ನು ಮೀರಿಸಲು ಸಾಧ್ಯವಿಲ್ಲ ಎಂದಲ್ಲ. ಖಂಡಿತವಾಗಿಯೂ ಸಚಿನ್​ರನ್ನು ಮೀರಿಸುವ ಸಾಮರ್ಥ್ಯವಿದೆ. 2022ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ರೀತಿಯಲ್ಲೇ ಚಾಂಪಿಯನ್ಸ್​ ಟ್ರೋಫಿಯಲ್ಲೂ ಕೊಹ್ಲಿ ಆಡಿದ್ದಾರೆ. ಅವರೊಬ್ಬ ಚಾಂಪಿಯನ್ ಆಟಗಾರ. ವಿಶೇಷವಾಗಿ ವೈಟ್-ಬಾಲ್ ಸ್ವರೂಪಗಳಲ್ಲಿ ಅವರನ್ನು ಮೀರಿಸುವಂತಹ ಆಟಗಾರ ಯಾರೂ ಇಲ್ಲ ಎಂದು ಪಾಂಟಿಂಗ್ ಅವರು ಐಸಿಸಿ ರಿವ್ಯೂ ಶೋನಲ್ಲಿ ಹೇಳಿದರು.

ಅಂದಹಾಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಮ್ಮ 14,000 ರನ್ ಮೈಲಿಗಲ್ಲು ತಲುಪಿದರು. ಇಲ್ಲಿಯವರೆಗೆ ಕೊಹ್ಲಿ 299 ಪಂದ್ಯಗಳಲ್ಲಿ 58.20 ಸರಾಸರಿಯಲ್ಲಿ 14085 ರನ್ ಗಳಿಸಿದ್ದಾರೆ. ಅವರು ತಮ್ಮ ಏಕದಿನ ವೃತ್ತಿಜೀವನದಲ್ಲಿ 51 ಶತಕಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಕ್ರಿಕೆಟ್​ ದಂತಕರೆ ಸಚಿನ್ (18426) ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ (14234) ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಕೊಹ್ಲಿ ಅವರಿದ್ದು, ಶೀಘ್ರದಲ್ಲೇ ಕುಮಾರ್​ ಸಂಗಕ್ಕಾರ ದಾಖಲೆ ಮುರಿಯಲಿದ್ದಾರೆ. (ಏಜೆನ್ಸೀಸ್​)