ನವದೆಹಲಿ: ಭಾರತದಲ್ಲಿ ಕ್ರೀಡಾಪಟುಗಳಿಗೆ ಆರ್ಥಿಕ ಸಮಸ್ಯೆಗಳು ಹೊಸದಲ್ಲ. ಸೂಕ್ತ ಪ್ರೋತ್ಸಾಹದ ಕೊರತೆ ಇದಕ್ಕೆ ಮುಖ್ಯ ಕಾರಣ. ಕ್ರೀಡಾಪಟುಗಳ ವೃತ್ತೀಜಿವನದ ಆರಂಭದಲ್ಲಿ ಇಂಥ ಸಂಕಷ್ಟಗಳು ಸಾಮಾನ್ಯ. ಆದರೆ, ಹರಿಯಾಣ ಮೂಲದ ಯುವ ಟೆನಿಸ್ ತಾರೆ ಸುಮಿತ್ ನಗಾಲ್ ಈಗ ಭಾರತದ ನಂ. 1 ಸಿಂಗಲ್ಸ್ ಆಟಗಾರರಾಗಿ ಬೆಳೆದಿದ್ದರೂ, ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವುದು ಆಘಾತಕಾರಿ ಎನಿಸಿದೆ.
ನನ್ನ ಬ್ಯಾಂಕ್ ಖಾತೆಯಲ್ಲಿ ಈಗ 900 ಯುರೋ (80 ಸಾವಿರ ರೂ.) ಮಾತ್ರ ಇದೆ. ಹೀಗಾಗಿ ಸಂತೃಪ್ತಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸುಮಿತ್ ನಗಾಲ್ ಸಂದರ್ಶನವೊಂದರಲ್ಲಿ ಅಲವತ್ತುಕೊಂಡಿದ್ದಾರೆ. ಇತ್ತೀಚೆಗೆ ಡೇವಿಸ್ ಕಪ್ನಲ್ಲಿ ಆಡಿದ ಎರಡೂ ಸಿಂಗಲ್ಸ್ ಪಂದ್ಯದಲ್ಲಿ ಗೆಲುವು ದಾಖಲಿಸಿದ 26 ವರ್ಷದ ಸುಮಿತ್ ನಗಾಲ್ ಎಟಿಪಿ ರ್ಯಾಂಕಿಂಗ್ನಲ್ಲಿ 159ನೇ ಸ್ಥಾನದಲ್ಲಿದ್ದಾರೆ. ಇದರಿಂದ ಸಿಂಗಲ್ಸ್ನಲ್ಲಿ ಸದ್ಯ ಅವರೇ ಭಾರತದ ಅಗ್ರ ಶ್ರೇಯಾಂಕಿತರೆನಿಸಿದ್ದಾರೆ.
ಮಹಾ ಟೆನಿಸ್ ಫೌಂಡೇಷನ್ನ ಪ್ರಶಾಂತ್ ಸುತರ್ ಅವರಿಂದ ಈಗ ನನಗೆ ಆರ್ಥಿಕ ನೆರವು ಲಭಿಸುತ್ತಿದೆ. ಜತೆಗೆ ಐಒಸಿಎಲ್ನಿಂದ ಮಾಸಿಕ ವೇತನ ಬರುತ್ತದೆ. ಇದೆಲ್ಲವನ್ನೂ ಈಗ ನಾನು ನನ್ನ ಟೆನಿಸ್ ವೃತ್ತೀಜಿವನದ ಮೇಲೆ ಸುರಿಯುತ್ತಿದ್ದೇನೆ. ಆದರೆ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 100ರೊಳಗೆ ಪ್ರವೇಶಿಸಬೇಕಾದರೆ ನಾನು ವಾರ್ಷಿಕವಾಗಿ 1 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ ಸದ್ಯ ಕೇಂದ್ರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ಸ್ ಯೋಜನೆಯಲ್ಲಿ (ಟಾಪ್ಸ್) ನನ್ನ ಹೆಸರಿಲ್ಲ. ಹೀಗಾಗಿ ಸರ್ಕಾರದ ಸಹಾಯ ಲಭಿಸುತ್ತಿಲ್ಲ ಎಂದು ನಗಾಲ್ ವಿವರಿಸಿದ್ದಾರೆ.
ನಗಾಲ್ ಈ ವರ್ಷ ಇದುವರೆಗೆ 24 ಟೂರ್ನಿಗಳಲ್ಲಿ ಆಡಿದ್ದು, ಒಟ್ಟಾರೆ 65 ಲಕ್ಷ ರೂ. ಬಹುಮಾನ ಸಂಪಾದಿಸಿದ್ದಾರೆ. ಈ ಪೈಕಿ ಯುಎಸ್ ಓಪನ್ನ ಅರ್ಹತಾ ಸುತ್ತಿನಲ್ಲಿ ಒಂದು ಪಂದ್ಯ ಆಡಿದ್ದರಿಂದ ಗರಿಷ್ಠ 18 ಲಕ್ಷ ರೂ. ಗಳಿಸಿದ್ದರು. "ನಾನೀಗ ಟೆನಿಸ್ನಿಂದ ಗಳಿಸುತ್ತಿರುವ ಎಲ್ಲವನ್ನೂ ಅದಕ್ಕೇ ಸುರಿಯುತ್ತಿದ್ದೇನೆ. ಕಳೆದ ಕೆಲ ವರ್ಷಗಳಿಂದ ಭಾರತದ ನಂ. 1 ಸಿಂಗಲ್ಸ್ ಆಟಗಾರನಾಗಿದ್ದರೂ, ದೊಡ್ಡ ಮೊತ್ತದ ಬೆಂಬಲ ಲಭಿಸುತ್ತಿಲ್ಲ. ದೇಶದಲ್ಲಿ ಈಗ ನಾನೊಬ್ಬನೇ ಗ್ರಾಂಡ್ ಸ್ಲಾಂ ಟೂರ್ನಿಗಳಿಗೆ ಅರ್ಹತೆ ಗಳಿಸುತ್ತಿದ್ದೇನೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾನು ಮಾತ್ರ ಟೆನಿಸ್ನಲ್ಲಿ ಪಂದ್ಯ ಗೆದ್ದಿದ್ದೆ. ಆದರೂ ಸರ್ಕಾರದಿಂದ ಬೆಂಬಲ ದೊರೆತಿಲ್ಲ' ಎಂದು ಪ್ರಾಥಮಿಕ ಶಾಲಾ ಪ್ರಾಧ್ಯಾಪಕನ ಪುತ್ರನಾಗಿರುವ ಸುಮಿತ್ ನಗಾಲ್ ಬೇಸರಿಸಿದ್ದಾರೆ.