ಕ್ರೀಡೆ

ಗಾಯದ ನಡುವೆ ಪಂತ್ ಕೆಚ್ಚದೆಯ ಆಟ: ಆಲ್‌ರೌಂಡರ್ ಶಾರ್ದೂಲ್​ ಠಾಕೂರ್ ಹೇಳಿದ್ದೇನು? Rishabh Pant

Rishabh Pant: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನ ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿದ ಉಪನಾಯಕ ರಿಷಭ್ ಪಂತ್ ಮನೋಸ್ಥೈರ್ಯವನ್ನು ಭಾರತದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಠಾಕೂರ್, ಪಂದ್ಯದ ಬಗ್ಗೆ ಪಂತ್​ಗೆ ಇರುವ ಬದ್ಧತೆಯನ್ನು ಪ್ರಶಂಸಿಸಿದರು. ನಿರ್ಣಾಯಕ ಹಂತದಲ್ಲಿ ಪಂತ್ ಅವರನ್ನು ಆಡಿಸುವುದು ನಮ್ಮ ಕಾರ್ಯಯೋಜನೆಯ ಭಾಗವಾಗಿತ್ತು, ಈ ವಿಷಯವಾಗಿ ವೈದ್ಯಕೀಯ ತಂಡದ ಜೊತೆ ನಿರಂತರ ಪ್ರಯತ್ನಗಳು ನಡೆದ ನಂತರ ಆಟಕ್ಕೆ ಮರಳಿದರು ಎಂದರು.

ಮಾತು ಮುಂದುವರಿಸಿದ ಠಾಕೂರ್​, ಈ ಹಿಂದೆಯೂ ಗಾಯದ ನಡುವೆ ಆಡಿದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಪಂತ್ ತೋರಿಸಿದ ಉತ್ಸಾಹಕ್ಕೆ ಸರಿಸಾಟಿಯಿಲ್ಲ. ಇಂತಹ ಸಮಯದಲ್ಲಿ ಆಟಗಾರರಲ್ಲಿ ಧೈರ್ಯ ಮುಖ್ಯ. ಪಂತ್ ಆಟ ನೋಡಲು ಆಟಗಾರರು ಸೇರಿದಂತೆ ಆಡಳಿತ ಮಂಡಳಿಯವರು ತುಂಬಾ ಉತ್ಸುಕರಾಗಿದ್ದೆವು. ಅವರಲ್ಲಿನ ಆತ್ಮವಿಶ್ವಾಸ ನೋವನ್ನೇ ಮರೆಸಿತು ಎಂದು ಮೆಚ್ಚುಗೆ ಸುರಿಮಳೆಗೈದರು.

ಇದೇ ವಿಷಯವಾಗಿ ಮಾತನಾಡಿರುವ ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೆಕರ್ , ಗಾಯದ ನೋವಲ್ಲೂ ಪಂತ್ ಆಟವಾಡಿದ್ದು ಮುಂದಿನ 50 ವರ್ಷಗಳ ಕಾಲ ಅಭಿಮಾನಿಗಳು ನೆನಪಿಡುವಂತಹ ಕ್ಷಣ. ಇದೇ ಕಾರಣದಿಂದ ಪಂತ್​ ಟೆಸ್ಟ್ ಕ್ರಿಕೆಟ್​ನಲ್ಲಿ ಯಶಸ್ವಿಯಾಗಿದ್ದಾರೆ ಎಂದರು. (ಏಜೆನ್ಸೀಸ್)