ನವದೆಹಲಿ: ಪ್ರಸ್ತುತ ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಸ್ಥಾನವನ್ನು ವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುವ ವಿಶ್ವಾಸ ನೀಡಿದ್ದಾರೆ. ಒಬ್ಬ ನಾಯಕನಾಗಿ ಹಾಗೂ ತಂಡದ ಉತ್ತಮ ಬ್ಯಾಟರ್ ಆಗಿ ಕಣಕ್ಕಿಳಿಯುವ ಸೂರ್ಯ, ಟಿ20 ಕ್ಯಾಪ್ಟನ್ಸಿಗೆ (T20 Captain) ಹೇಳಿ ಮಾಡಿಸಿದ ಆಟಗಾರ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಈ ಹಿಂದೆ ಟಿ20 ನಾಯಕನಾಗಿ ಟೀಮ್ನ ಮುನ್ನಡೆಸಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು (Hardik Pandya) ಕ್ಯಾಪ್ಟನ್ಸಿ ಸ್ಥಾನದಿಂದ ಕೆಳಗಿಳಿಸಿ, ಆ ಜಾಗಕ್ಕೆ ಸೂರ್ಯಕುಮಾರ್ ಅನ್ನು ನೇಮಕ ಮಾಡಲಾಯಿತು. ಇದು ಕೆಲವರಲ್ಲಿ ಗೊಂದಲ ಮೂಡಿಸಿದ್ದೇ ಆದರೂ ಅಂತಿಮವಾಗಿ ಒಪ್ಪಿಕೊಂಡರು. ಪ್ರಸ್ತುತ ಭಾರತೀಯ ಕ್ರಿಕೆಟ್ನಲ್ಲಿ ಐಪಿಎಲ್ನದ್ದೇ ಸದ್ದು-ಗದ್ದಲ ನಡೆಯುತ್ತಿರುವಾಗ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮಾತ್ರ ಪಾಂಡ್ಯ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ.
ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ರೋಹಿತ್ ಶರ್ಮ ಕ್ಯಾಪ್ಟನ್ ಆಗಿದ್ದರೆ, ಹಾರ್ದಿಕ್ ಉಪನಾಯಕನ ಸ್ಥಾನ ವಹಿಸಿಕೊಂಡಿದ್ದರು. 17 ವರ್ಷಗಳ ಬಳಿಕ ಟಿ20 ಟ್ರೋಫಿ ಗೆದ್ದುಕೊಟ್ಟ ಬೆನ್ನಲ್ಲೇ ರೋಹಿತ್ ಟಿ20 ಫಾರ್ಮೆಟ್ಗೆ ನಿವೃತ್ತಿ ಘೋಷಿಸಿದರು. ಶರ್ಮ ನಿರ್ಗಮನದ ಹಿನ್ನಲೆ ಡೆಪ್ಯೂಟಿ ಕ್ಯಾಪ್ಟನ್ ಸ್ಥಾನದಲ್ಲಿದ್ದ ಪಾಂಡ್ಯರನ್ನು ಟೀಮ್ ಇಂಡಿಯಾದ ನೂತನ ಟಿ20 ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆದ್ರೆ, ಗೌತಮ್ ಗಂಭೀರ್ ತಂಡದ ನೂತನ ಹೆಡ್ ಕೋಚ್ ಆಗ್ತಿದ್ದಂತೆ ಒಂದಷ್ಟು ಕಾರಣಗಳಿಂದ ಹಾರ್ದಿಕ್ರನ್ನು ಕ್ಯಾಪ್ಟನ್ ಹುದ್ದೆಯಿಂದ ಕೆಳಗಿಳಸಲಾಯಿತು. ಸದ್ಯ ಈ ವಿಷಯವನ್ನು ಪ್ರಸ್ತಾಪಿಸಿರುವ ಹರ್ಭಜನ್, ಭಾರತಕ್ಕೆ ಟಿ20 ನಾಯಕನಾಗಿ ಪಾಂಡ್ಯ ಇದ್ದರೆ ಸೂಕ್ತ ಎಂದಿದ್ದಾರೆ.
"ಹಾರ್ದಿಕ್ ಅಂತಹದ್ದೇನು ತಪ್ಪು ಮಾಡಿದರು ಎಂಬುದು ನನಗೆ ಗೊತ್ತಿಲ್ಲ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಆತನಿಗೆ ಮುಂಬರುವ ಸರಣಿ ಮತ್ತು ಆಯಾ ಫಾರ್ಮೆಟ್ನಲ್ಲಿ ಪಾಂಡ್ಯ ಉಪಸ್ಥಿತಿ ಹೇಗಿರಬೇಕು ಎಂಬುದನ್ನು ಸರಿಯಾಗಿ ವಿವರಿಸಬಹುದಿತ್ತು. ರೋಹಿತ್ ಅನುಪಸ್ಥಿತಿಯಲ್ಲಿ ನಾಯಕನ ಜವಾಬ್ದಾರಿ ಹೊತ್ತಿದ್ದ ಹಾರ್ದಿಕ್ರನ್ನು ಇಂಜುರಿ ನೆಪದಲ್ಲಿ ಹೊರಹಾಕಿದ್ದು ಸರಿಯಲ್ಲ. ಕ್ಯಾಪ್ಟನ್ ಸ್ಥಾನಕ್ಕೆ ಪಾಂಡ್ಯ ಅರ್ಹ. ಟಿ20 ನಾಯಕನಾಗಿ ಸೂರ್ಯಕುಮಾರ್ ಯಾದವ್ರನ್ನು ಆಯ್ಕೆ ಮಾಡಿದ್ದರಲ್ಲಿ ನನಗೇನು ಬೇಸರ ಅಥವಾ ಆಕ್ಷೇಪಣೆ ಇಲ್ಲ. ಆದ್ರೆ, ಫಿಟ್ನೆಸ್ ವಿಷಯವನ್ನು ಮುಂದಿಟ್ಟು, ಪಾಂಡ್ಯರನ್ನು ಕೆಳಗಿಳಿಸಿದ್ದು ಏಕೆ? ಅನಿಸಿತು. 'ಸ್ಕೈ'ಗೆ ಕ್ಯಾಪ್ಟನ್ಸಿ ಅವಶ್ಯಕತೆ ಇರಲಿಲ್ಲ. ಆದರೆ, ಹಾರ್ದಿಕಗೆ ಅವಶ್ಯವಿತ್ತು. ಈ ವಿಷಯದಲ್ಲಿ ಹಾರ್ದಿಕ್ ಪಾಂಡ್ಯ ಮಾತ್ರ ಅನ್ಲಕ್ಕಿ" ಎಂದು ಬಜ್ಜಿ ಹೇಳಿದ್ದಾರೆ,(ಏಜೆನ್ಸೀಸ್).