ನವದೆಹಲಿ: ಭಾರತದ ಟಿ20 ತಂಡದಲ್ಲೀಗ ಸೂರ್ಯಕುಮಾರ್ ನಾಯಕತ್ವದ ಯುಗ. ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾದ ಬೆನ್ನಲ್ಲೇ ಶ್ರೀಲಂಕಾಗೆ ಚೊಚ್ಚಲ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿದ್ದು, 2-0 ಅಂತರದಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿದೆ.
ಇನ್ನು ಟಿ20 ನಾಯಕನಾಗಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದು, ಉತ್ತಮ ಆರಂಭವನ್ನೇ ಪಡೆದಿದ್ದಾರೆ. ಪಂದ್ಯ ಗೆದ್ದ ಬಳಿಕ ಸೂರ್ಯ ಆಡಿದ ಮಾತೊಂದು ಇದೀಗ ಕ್ರಿಕೆಟ್ ಪ್ರಿಯರ ಗಮನಸೆಳೆದಿದ್ದು, ನಾಯಕ ಅಂದ್ರೆ ಹೀಗಿರಬೇಕು ಎನ್ನುವಂತೆ ಮಾಡಿದೆ. ನಾನು ಕ್ಯಾಪ್ಟನ್ ಆಗಲು ಬಯಸುವುದಿಲ್ಲ ಬದಲಿಗೆ ಒಬ್ಬ ಲೀಡರ್ ಆಗಿ ತಂಡವನ್ನು ಮುನ್ನಡೆಸಲು ಇಷ್ಟಪಡುತ್ತೇನೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ ಸೂರ್ಯರ ಕ್ಯಾಪ್ಟನ್ಸಿಗೆ ಫಿದಾ ಆಗಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಮಿಸ್ಟರ್ 360 ಕುರಿತು ಗುಣಗಾನ ಮಾಡಿದ್ದರು. ನಾನು ತಂಡದ ಕ್ಯಾಪ್ಟನ್ನಂತೆ ವರ್ತಿಸದೆ ನಾಯಕನಾಗಲು ಬಯಸುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ಹೇಳಿಕೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ದೃಶ್ಯದ ತುಣುಕನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ,(ಏಜೆನ್ಸೀಸ್).