ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಟೀಮ್ ಇಂಡಿಯಾ 110 ರನ್ಗಳ ಸೋಲುಂಡಿದ್ದು, ಆತಿಥೇಯರ ಎದುರು ಭಾರೀ ಮುಖಭಂಗವನ್ನು ಅನುಭವಿಸಿದೆ. ನೂತನ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟಿ20 ಸರಣಿಯನ್ನು ಗೆದ್ದು ಬೀಗಿದ್ದ ಭಾರತ ತಂಡವು ಏಕದಿನದಲ್ಲಿ ಹೀನಾಯವಾಗಿ ಸೋಲುಂಡಿದ್ದು, ಪ್ರವಾಸಿ ತಂಡದ ಪ್ರದರ್ಶನಕ್ಕೆ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.
ಸ್ಪಿನ್ ಸ್ನೇಹಿ ಪಿಚ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಆರಂಭಿಕರಾದ ಆವಿಷ್ಕಾ ಫರ್ನಾಂಡೋ (96 ರನ್, 102 ಎಸೆತ, 9 ಬೌಂಡರಿ, 2 ಸಿಕ್ಸರ್), ಕುಶಾಲ್ ಮೆಂಡಿಸ್ (59 ರನ್, 82 ಎಸೆತ, 4 ಬೌಂಡರಿ) ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 248 ಗಳಿಸಿತು. ಗುರಿಯನ್ನು ಬೆನ್ನತ್ತಿ ಗೆಲ್ಲುವ ವಿಶ್ವಾಸದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತದ ಬ್ಯಾಟ್ಸ್ಮನ್ಗಳನ್ನು ಇನ್ನಿಲ್ಲದಂತೆ ಕಾಡಿದ ಶ್ರೀಲಂಕಾದ ಬೌಲರ್ಗಳು ಪ್ರವಾಸಿಗರನ್ನು 26.1 ಓವರ್ಗಳಲ್ಲಿ 138 ರನ್ಗಳಿಗೆ ಆಲೌಟ್ ಮಾಡುವ ಮೂಲಕ ತಂಡಕ್ಕೆ ಸರಣಿಯನ್ನು ದಕ್ಕಿಸಿದರು. ಈ ಮೂಲಕ ಮೂಲಕ ಶ್ರೀಲಂಕಾ ತಂಡವು ಟಿ20 ಸರಣಿಯ ಸೋಲಿನ ಸೇಡನ್ನು ಏಕದಿನದಲ್ಲಿ ತೀರಿಸಿಕೊಳ್ಳುವ ಮೂಲಕ ಭಾರತಕ್ಕೆ ದಿಟ್ಟ ತಿರುಗೇಟು ನೀಡಿದೆ.
ಏಕದಿನ ಸರಣಿಯ ಸೋಲಿನ ಕುರಿತು ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಇದು ಕಾಳಜಿ ಎಂದು ನಾನು ಭಾವಿಸುವುದಿಲ್ಲ. ನಾವು ವೈಯಕ್ತಿಕವಾಗಿ ಮತ್ತು ಆಟದ ಯೋಜನೆಯಾಗಿ ನೋಡಬೇಕಾದ ವಿಷಯವಾಗಿದೆ. ನಾವು ತಂಡಕ್ಕೆ ಆಡುವಾಗ ನಮಗೆ ಎಂದಿಗೂ ತೃಪ್ತಿ ಇರುವುದಿಲ್ಲ. ಆದರೆ, ನಾವು ಉತ್ತಮ ಆಟಕ್ಕೆ ಮನ್ನಣೆ ನೀಡಬೇಕಿದೆ. ಶ್ರೀಲಂಕಾ ಕ್ರಿಕೆಟ್ ತಂಡದವರು ಉತ್ತಮವಾಗಿ ಆಡಿದರು ಮತ್ತು ನಾವು ಪರಿಸ್ಥಿತಿಗಳನ್ನು ನೋಡಿ ಸಂಯೋಜನೆಗಳೊಂದಿಗೆ ಹೋಗಿದ್ದೇವೆ.
ನಾವು ಸಕಾರಾತ್ಮಕ ಅಂಶಗಳಿಗಿಂತ ಹೆಚ್ಚಾಗಿ ನೋಡಬೇಕಾದ ಹಲವಾರು ಕ್ಷೇತ್ರಗಳಿವೆ. ತಂಡದಲ್ಲಿ ಕೆಲವು ಬದಲಾವಣೆಗಳಾಗಬೇಕಿದ್ದು, ಕೆಲವೊಮ್ಮ ಈ ರೀತಿಯಾಗುತ್ತದೆ. ಸರಣಿ ಸೋತಿದ್ದೇವೆ ಎಂದಾಕ್ಷಣ ಪ್ರಪಂಚ ಕೊನೆಗೊಂಡಂತಲ್ಲ. ಆದರೆ, ನಾವು ಸೋಲಿನ ನಂತರ ಹೇಗೆ ಕಮ್ಬ್ಯಾಕ್ ಮಾಡುತ್ತೀವಿ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಟೀಮ್ ಇಂಡಿಯಾ ನಾಯಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.