ಕ್ರೀಡೆ

ಚೊಚ್ಚಲ ಖೋಖೋ ವಿಶ್ವಕಪ್​ನಲ್ಲಿ ಉಪಾಂತ್ಯಕ್ಕೇರಿದ ಆತಿಥೇಯ ಭಾರತ

ನವದೆಹಲಿ: ಆತಿಥೇಯ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಚೊಚ್ಚಲ ಆವೃತ್ತಿಯ ಖೋಖೋ ವಿಶ್ವಕಪ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿವೆ. ಬಲಿಷ್ಠ ನಿರ್ವಹಣೆ ಮುಂದುವರಿಸಿದ ಭಾರತದ ಮಹಿಳಾ ತಂಡ ಶುಕ್ರವಾರ ನಡೆದ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 109-16 ಅಂಕಗಳಿಂದ ಸುಲಭ ಗೆಲುವು ದಾಖಲಿಸಿತು. ಭಾರತದ ಪುರುಷರ ತಂಡ ಶ್ರೀಲಂಕಾ ಎದುರು 100-40 ಅಂಕಗಳಿಂದ ಗೆದ್ದು ಉಪಾಂತ್ಯಕ್ಕೇರಿತು.

ಐಜಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರಿಯಾಂಕಾ ಇಂಗಲೆ ನೇತೃತ್ವದ ನೇತೃತ್ವದ ಮಹಿಳಾ ತಂಡ ಪ್ರಾಬಲ್ಯ ಸಾಧಿಸಿತು. ಸತತ 5ನೇ ಪಂದ್ಯದಲ್ಲಿ 100ಕ್ಕೂ ಅಧಿಕ ಅಂಕ ಕಲೆಹಾಕಿದ ಕನ್ನಡತಿ ಚೈತ್ರಾ ಬಿ. ಒಳಗೊಂಡ ಮಹಿಳಾ ತಂಡ ಶನಿವಾರ ನಡೆಯಲಿರುವ ಸೆಮಿಫೈನಲ್​ನಲ್ಲಿ ದಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಉಗಾಂಡ-ನೇಪಾಳ ನಡುವೆ ಇನ್ನೊಂದು ಸೆಮಿಫೈನಲ್​ ನಡೆಯಲಿದೆ.

ಪುರುಷರ ವಿಭಾಗದಲ್ಲಿ ಕನ್ನಡಿಗ ಗೌತಮ್​ ಎಂ.ಕೆ. ಒಳಗೊಂಡ ಭಾರತ ತಂಡ ಶ್ರೀಲಂಕಾ ಎದುರು ಪೂರ್ಣ ಹಿಡಿತ ಸಾಧಿಸಿತು. ಪ್ರತಿಕ್​ ವೈಕರ್​ ನಾಯಕತ್ವದ ಭಾರತ ತಂಡ ಸೆಮೀಸ್​ನಲ್ಲಿ ದ. ಆಫ್ರಿಕಾವನ್ನು ಎದುರಿಸಲಿದೆ. ಇರಾನ್​-ನೇಪಾಳ ಇನ್ನೊಂದು ಸೆಮೀಸ್​ನಲ್ಲಿ ಎದುರಾಗಲಿವೆ.

ಇಂದು ಸೆಮಿಫೈನಲ್​

ಮಹಿಳಾ ವಿಭಾಗ: ಭಾರತ-ದಕ್ಷಿಣ ಆಫ್ರಿಕಾ

ಆರಂಭ: ರಾತ್ರಿ 7.00

ಪುರುಷರ ವಿಭಾಗ: ಭಾರತ-ದಕ್ಷಿಣ ಆಫ್ರಿಕಾ

ಆರಂಭ: ರಾತ್ರಿ 8.15

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ.