ಡೆಹ್ರಾಡೂನ್ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪದಕ ಗೆಲ್ಲದಿದ್ದರೂ, ಸೆಮಿಫೈನಲ್ಸ್ ತನಕ ಸಾಗಿ ಉತ್ತಮ ಆಟಗಾರಿಕೆ ಪ್ರದರ್ಶಿಸಿದೆ. ಈ ಪಯಣದಲ್ಲಿ ಹಲವು ಬಲಿಷ್ಠ ತಂಡಗಳನ್ನು ಮಣಿಸಿದ ಹಾಕಿ ಆಟಗಾರ್ತಿಯರು ದೇಶದ ಹೆಣ್ಣುಮಕ್ಕಳಿಗೆ ಸಾಧನೆಯ ದಾರಿ ಹಿಡಿಯಲು ಮಾದರಿಯಾಗಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ದೇಶದ ಒಲಿಂಪಿಕ್ಸ್ ಹಾಕಿ ತಂಡದ ಸದಸ್ಯೆಯಾಗಿದ್ದ ಹರಿದ್ವಾರ ಮೂಲದ ವಂದನಾ ಕಟಾರಿಯಾ ಅವರನ್ನು ಉತ್ತರಾಖಂಡದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಯಭಾರಿಯಾಗಿ ನೇಮಿಸಲಾಗಿದೆ. ಈ ನಿರ್ಧಾರವನ್ನು ರಾಜ್ಯದ ಸಿಎಂ ಪುಷ್ಕರ್ ಸಿಂಗ್ ಧಾಮಿ ಇಂದು ಘೋಷಿಸಿದ್ದಾರೆ.
ಜೊತೆಗೇ ವಂದನಾಗೆ ರಾಜ್ಯದ ಪ್ರತಿಷ್ಠಿತ ಪುರಸ್ಕಾರವಾದ 'ತಿಲು ರೌತೇಲಿ' ಪ್ರಶಸ್ತಿಯನ್ನು ಪ್ರದಾನಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಈ ಮುನ್ನ, ವಂದನಾ ಕಟಾರಿಯಾ ಅವರಿಗೆ 25 ಲಕ್ಷ ರೂ.ಗಳ ನಗದು ಬಹುಮಾನವನ್ನು ಕೂಡ ಉತ್ತರಾಖಂಡ ಸರ್ಕಾರ ಘೋಷಿಸಿದೆ. (ಏಜೆನ್ಸೀಸ್)