ಕ್ರೀಡೆ

ಹಾಕಿ: ಸೆಮಿಫೈನಲ್ಸ್​​ನಲ್ಲಿ ಮುಗ್ಗರಿಸಿದ ಭಾರತದ ಮಹಿಳಾ ತಂಡ

ಟೋಕಿಯೋ : ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ತುತ್ತಿದ್ದ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್​ನಲ್ಲಿ ಮುಗ್ಗರಿಸಿದೆ. ಅರ್ಜೆಂಟಿನಾ ತಂಡದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ರಾಣಿ ರಾಮಪಾಲ್​ ನಾಯಕತ್ವದ ತಂಡ 1-2 ಸ್ಕೋರ್​ನೊಂದಿಗೆ ಸೋಲನುಭವಿಸಿದೆ.

ವರ್ಲ್ಡ್​ ನಂ.2 ಅರ್ಜೆಂಟಿನಾ ವಿರುದ್ಧ ಕಷ್ಟಕರ ಪಂದ್ಯದಲ್ಲಿ ಶಕ್ತಿ ಮೀರಿ ಸೆಣೆಸಿದ ಭಾರತ ತಂಡದ ಚಿನ್ನದ ಕನಸು ಭಗ್ನವಾಗಿದೆ. ಆದಾಗ್ಯೂ ಇನ್ನೂ ಪದಕದ ನಿರೀಕ್ಷೆ ಬತ್ತಿಲ್ಲ. ಕಂಚಿನ ಪದಕಕ್ಕಾಗಿ, ಮತ್ತೊಂದು ಸೆಮಿಫೈನಲ್ಸ್​ನಲ್ಲಿ ಸೋತ ಬ್ರಿಟನ್ ತಂಡದ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಸೆಣೆಸಲಿದೆ.

ಮಂಗಳವಾರದಂದು ಭಾರತದ ಪುರುಷರ ಹಾಕಿ ತಂಡ ಕೂಡ ಸೆಮಿಫೈನಲ್ಸ್​ನಲ್ಲಿ ಸೋಲಪ್ಪಿತ್ತು. ನಾಳೆ ಬೆಳಿಗ್ಗೆ 7 ಗಂಟೆಗೆ, ಪುರುಷರ ತಂಡವು ಕಂಚಿನ ಪದಕಕ್ಕಾಗಿ ಜರ್ಮನಿ ತಂಡದ ವಿರುದ್ಧ ಸೆಣೆಸಲಿದೆ. (ಏಜೆನ್ಸೀಸ್)