ನವದೆಹಲಿ: ಐಪಿಎಲ್ ಮಾದರಿಯ ಹಾಕಿ ಟೂರ್ನಿ "ಹಾಕಿ ಇಂಡಿಯಾ ಲೀಗ್'ಗೆ (ಎಚ್ಐಎಲ್) 7 ವರ್ಷಗಳ ಬಳಿಕ ಮರುಜೀವ ನೀಡಲು ಹಾಕಿ ಇಂಡಿಯಾ ಮುಂದಾಗಿದೆ. ಡಿಸೆಂಬರ್ 27 ಅಥವಾ 28ರಿಂದ ಫೆಬ್ರವರಿ 1ರವರೆಗೆ ಟೂರ್ನಿ ಆಯೋಜನೆಗೊಳ್ಳಲಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ರ್ಟಿಕಿ ಖಚಿತಪಡಿಸಿದ್ದಾರೆ.
ಹಾಕಿ ಇಂಡಿಯಾ ಲೀಗ್ 2013ರಲ್ಲಿ ಆರಂಭಗೊಂಡಿತ್ತು ಮತ್ತು 2017ರಲ್ಲಿ ಕೊನೇ ಆವೃತ್ತಿ ನಡೆದಿದೆ. ಇದೀಗ ಮತ್ತೆ ಹಾಕಿ ಇಂಡಿಯಾ ಲೀಗ್ ಆಯೋಜಿಸುವ ಹಾಕಿ ಇಂಡಿಯಾದ ಯೋಜನೆಗೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟವೂ (ಎಫ್ಐಎಚ್) ಹಸಿರು ನಿಶಾನೆ ತೋರಿಸಿದೆ.
ಈ ಬಾರಿ ಹಾಕಿ ಇಂಡಿಯಾ ಲೀಗ್ನಲ್ಲಿ ಪುರುಷರ ಜತೆಗೆ ಮಹಿಳಾ ತಂಡಗಳ ಸ್ಪರ್ಧೆಗಳೂ ನಡೆಯಲಿವೆ. ಪುರುಷರ ವಿಭಾಗದಲ್ಲಿ 8 ಮತ್ತು ಮಹಿಳಾ ವಿಭಾಗದಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಈ ಪೈಕಿ ಒಂದು ತಂಡ, ಭಾರತ ಹಾಕಿ ತಂಡದ ಪ್ರಮುಖ ಪ್ರಾಯೋಜಕನಾಗಿರುವ ಒಡಿಶಾ ರಾಜ್ಯದಾಗಿರಲಿದೆ. ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಸೆಪ್ಟೆಂಬರ್ನಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಆಡುವ ಆಟಗಾರರ ನೋಂದಣಿ ಪ್ರಕ್ರಿಯೆ ಈಗಾಗಲೆ ಆರಂಭಗೊಂಡಿದೆ. ಟೂರ್ನಿಯಲ್ಲಿ ಆಡಲು ಒಟ್ಟು 15 ದೇಶಗಳ ಅಗ್ರ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಪಂದ್ಯಗಳು ರೌರ್ಕೆಲಾ ಮತ್ತು ರಾಂಚಿಯಲ್ಲಿ ನಡೆಯಲಿವೆ.