Aakash Chopra : ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರು ಸ್ಟಾರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರನ್ನು ಟೀಕಿಸಿದ್ದಾರೆ.
ಸಂಜು ಅವರು ವೇಗದ ಬೌಲರ್ಗಳನ್ನು ಎದುರಿಸಲು ತಡಕಾಡುತ್ತಿದ್ದಾರೆ. ವೇಗಿಗಳ ಎದುರು ಸಂಜು ಅವರ ಸ್ಟ್ರೈಕ್ರೇಟ್ ಕುಸಿಯುತ್ತಿದೆ. ಪೇಸ್ ಮತ್ತು ಬೌನ್ಸ್ ಇರುವ ಪಿಚ್‌ನಲ್ಲಿ ಸಂಜು ಕೈಯಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕಾಶ್ ಚೋಪ್ರಾ ಟೀಕಾ ಪ್ರಹಾರ ನಡೆಸಿದರು.
ಅಂದಹಾಗೆ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಸದ್ಯ ಎರಡು ಪಂದ್ಯಗಳು ಮುಗಿದಿದ್ದು, ಎರಡೂ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಮೊದಲ ಪಂದ್ಯದಲ್ಲಿ 20 ಎಸೆತಗಳಲ್ಲಿ 26 ರನ್ ಗಳಿಸಿದ್ದ ಸಂಜು, ಎರಡನೇ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿದರು. ಈ ಹಿನ್ನೆಲೆಯಲ್ಲಿ ಆಕಾಶ್ ಚೋಪ್ರಾ ಅವರು ಸ್ಯಾಮ್ಸನ್ ಅವರನ್ನು ಟೀಕಿಸಿದ್ದಾರೆ.
ಸಂಜು ಬಗ್ಗೆ ಹೇಳುವುದಾದರೆ, ಅವರು 140 ಕಿಮೀಗಿಂತ ಹೆಚ್ಚಿನ ವೇಗದ ಎಸೆತಗಳಲ್ಲಿ ಸುಲಭವಾಗಿ ಔಟ್ ಆಗುತ್ತಾರೆ. ಅವರ ಅಂಕಿಅಂಶಗಳನ್ನು ನೋಡಿದರೆ, ಅವರ ಪ್ರದರ್ಶನ ಕೇವಲ ಸರಾಸರಿ ಎಂದು ತೋರಿಸುತ್ತವೆ. ನೀವು ಅಂದುಕೊಂಡಂತೆ ಆತ ಶ್ರೇಷ್ಠ ಬ್ಯಾಟ್ಸ್ಮನ್ ಅಲ್ಲ, ಸಾಧಾರಣ ಬ್ಯಾಟ್ಸಮನ್ ಅಷ್ಟೇ. ಪೇಸ್ ಮತ್ತು ವೇಗದ ಎಸೆತಗಳಲ್ಲಿ ರನ್ ಗಳಿಸಲು ಪರದಾಡುತ್ತಾರೆ ಮತ್ತು ಬೇಗನೆ ಔಟಾಗುತ್ತಾರೆ. ಅವರ ಸ್ಟ್ರೈಕ್ ರೇಟ್ ಅಂತೂ ತುಂಬಾ ಶೋಚನೀಯವಾಗಿದೆ ಎಂದು ಆಕಾಶ್ ಚೋಪ್ರಾ ಟೀಕೆಗಳ ಸುರಿಮಳೆಗೈದರು.
ಸಂಜು ಅವರು ಕ್ರೀಸ್ ಮೇಲೆ ಬಂದು ಸ್ಕ್ವೇರ್ ಲೆಗ್ ಕಡೆಗೆ ತಿರುಗುತ್ತಿದ್ದಾರೆ. ಬೌಲರ್‌ಗಳು ವೇಗದ ಬೌನ್ಸರ್‌ಗಳನ್ನು ಎಸೆಯುವ ಮೂಲಕ ಮತ್ತು ಫೀಲ್ಡರ್ ಅನ್ನು ಸರಿಯಾಗಿ ನಿಯೋಜಿಸುವ ಮೂಲಕ ಸಂಜು ಅವರನ್ನು ಸುಲಭವಾಗಿ ಬಲೆಗೆ ಬೀಳಿಸುತ್ತಿದ್ದಾರೆ. ಅವರು ಎರಡೂ ಪಂದ್ಯಗಳಲ್ಲಿ ಬಹುತೇಕ ಒಂದೇ ರೀತಿಯಲ್ಲಿ ಔಟಾದರು ಎಂದು ಚೋಪ್ರಾ ಹೇಳಿದರು.
ಸಂಜು ಸ್ಯಾಮ್ಸನ್ ಬಗ್ಗೆ ಆಕಾಶ್ ಚೋಪ್ರಾ ಹೇಳಿದ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)