ಕ್ರೀಡೆ

ಕೊಟ್ಟ ಅವಕಾಶ ಕೈಚೆಲ್ಲಿದ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​! ಇಲ್ಲಿಗೆ ಮುಗಿಯುತ್ತಾ ಇವರ ಕ್ರಿಕೆಟ್ ಕರಿಯರ್​?

ಶ್ರೀಲಂಕಾ: ಪ್ರಸ್ತುತ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಟೀಮ್ ಇಂಡಿಯಾ ಒಂದು ಪಂದ್ಯವನ್ನು ಈಗಾಗಲೇ ಗೆದ್ದು ಬೀಗಿತ್ತು. ಇನ್ನು ನಿನ್ನೆ (ಜು.28) ನಡೆದ ಎರಡನೇ ಪಂದ್ಯವನ್ನು 7 ವಿಕೆಟ್​ಗಳ ಅಂತರದಿಂದ ಗೆದ್ದ ಭಾರತ ಟಿ20 ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆಲುವಿನತ್ತ ಮುಖ ಮಾಡಿರುವ ಭಾರತಕ್ಕೆ ಗೆಲುವಿನ ಕಿರೀಟ ಆಗಲೇ ಮುಡಿಗೇರಿದಂತಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಶ್ರೀಲಂಕಾಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಇನ್ನು ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ಆರಂಭದಲ್ಲಿ ಮಳೆ ಕಾಡಲಾರಂಭಿಸಿತು. ತದನಂತರ ಡಿಎಲ್​ಎಸ್​ ವಿಧಾನದಡಿ ಪಂದ್ಯ 8 ಓವರ್​ಗಳಿಗೆ ಇಳಿಕೆಯಾಗಿ, 78 ರನ್​ಗಳ ಗುರಿಯನ್ನು ಚೇಸ್ ಮಾಡಬೇಕಾಯಿತು. ಇದನ್ನು ಸುಲಭವಾಗಿ ತಲುಪಿದ ಭಾರತ 6.3 ಓವರ್​ಗೆ 81 ರನ್​ ಸಿಡಿಸುವ ಮೂಲಕ 2-0 ಅಂತರದಲ್ಲಿ ಟಿ20 ಸರಣಿ ಗೆದ್ದಿದೆ.

ಟಿ20 ವಿಶ್ವಕಪ್​ ತಂಡದಲ್ಲಿದ್ದ ಸಂಜು ಸ್ಯಾಮ್ಸನ್​ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡರೂ ಸಹ ಉತ್ತಮ ಓಪನಿಂಗ್ ಕೊಡುವಲ್ಲಿ ವಿಫಲರಾದರು. ಮೊದಲ ಮ್ಯಾಚ್​ನಲ್ಲಿ ಚಾನ್ಸ್​ ಪಡೆಯದ ಸಾಮ್ಸನ್​ಗೆ ಎರಡನೇ ಪಂದ್ಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಯಶಸ್ವಿ ಜೈಸ್ವಾಲ್​ ಜತೆ ಓಪನಿಂಗ್ ಬಂದ ಸಂಜು, ಗೋಲ್ಡನ್​ ಡಕ್​ಗೆ ಪೆವಿಲಿಯನ್​ ಹಾದಿಹಿಡಿದರು. ಇದು ನೋಡುಗರಿಗೆ ಬಹಳ ಶಾಕಿಂಗ್ ಆಗಿತ್ತು. ಭಾರೀ ಭರವಸೆ ಇಟ್ಟು ಕಳುಹಿಸಲಾಗಿದ್ದ ಸ್ಟಾರ್​ ಬ್ಯಾಟ್ಸ್​ಮನ್​ ಇಂತಹ ಕಳಪೆ ಪ್ರದರ್ಶನ ತೋರಿದ್ದು, ಇದೀಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ತನಗೆ ಕೊಟ್ಟ ಅವಕಾಶವನ್ನು ಬಳಸಿಕೊಳ್ಳದೆ ಹೋದ್ರಾ ಸಾಮ್ಸನ್​? ಇಲ್ಲಿಗೆ ಮುಗಿಯುತ್ತಾ ಇವರ ಕ್ರಿಕೆಟ್ ಕರಿಯರ್​ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಸಾಮಾನ್ಯವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬರುತ್ತಿದ್ದ ಸಂಜು ಸ್ಯಾಮ್ಸನ್​, ನಿನ್ನೆಯ ಪಂದ್ಯದಲ್ಲಿ ಶುಭಮನ್ ಗಿಲ್​ ಸ್ಥಾನ ತುಂಬುವ ಸಲುವಾಗಿ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದರು. ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಕ್ಯಾಪ್ಟನ್ ಆಗಿರುವ ಸಂಜು, 17ನೇ ಆವೃತ್ತಿಯಲ್ಲಿ ಅದ್ಭುತ ಇನ್ನಿಂಗ್ಸ್​ ಆಡಿದ್ದರು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡ ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್​, ಸ್ಯಾಮ್ಸನ್​ಗೆ ಓಪನಿಂಗ್ ಆಡುವ ಅವಕಾಶ ನೀಡಿದರು. ಆದ್ರೆ, ಕೊಟ್ಟ ಚಾನ್ಸ್ ಮಿಸ್​ ಮಾಡಿಕೊಂಡ ಸಂಜುಗೆ ಇದೀಗ ಮುಂದೆ ತಂಡದಲ್ಲಿ ಸ್ಥಾನ ಸಿಗಲಿದ್ಯಾ? ಅವಕಾಶಗಳು ಕಡಿಮೆ ಆಗಲಿದ್ಯಾ? ಎಂಬುದೇ ಸದ್ಯ ದೊಡ್ಡ ಪ್ರಶ್ನೆಯಾಗಿ ಕಾಡಲಾರಂಭಿಸಿದೆ,(ಏಜೆನ್ಸೀಸ್).