ಕ್ರೀಡೆ

ಅಡಿಲೇಡ್​ ಟೆಸ್ಟ್​ನಲ್ಲಿ ಆಸ್ಟ್ರೆಲಿಯಾಕ್ಕೆ ಶರಣಾದ ವೆಸ್ಟ್​ ಇಂಡೀಸ್​

ಅಡಿಲೇಡ್​: ವೇಗಿ ಜೋಶ್​ ಹ್ಯಾಸಲ್​ವುಡ್​ (35ಕ್ಕೆ 5) 11ನೇ ಬಾರಿ ಕಬಳಿಸಿದ 5 ವಿಕೆಟ್​ ಗೊಂಚಲಿನ ನೆರವಿನಿಂದ ಆಸ್ಟ್ರೆಲಿಯಾ ತಂಡ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1&0 ಮುನ್ನಡೆ ಸಾಧಿಸಿದೆ.

ಮೂರನೇ ದಿನವಾದ ಶುಕ್ರವಾರ 6 ವಿಕೆಟ್​ಗೆ 73 ರನ್​ಗಳಿಂದ 2ನೇ ಇನಿಂಗ್ಸ್​ ಮುಂದುವರಿಸಿದ ವಿಂಡೀಸ್​, ಬೆಳಗ್ಗೆ 13.3 ಓವರ್​ಗಳ ಆಟದಲ್ಲೇ 120 ರನ್​ಗಳಿಗೆ ಸರ್ವಪತನ ಕಂಡಿತು. ವಿಂಡೀಸ್​ ಇನಿಂಗ್ಸ್​ ಸೋಲಿನಿಂದ ಪಾರಾದರೂ ಆಸೀಸ್​ 26 ರನ್​ಗಳ ಸುಲಭ ಗುರಿ ಪಡೆಯಿತು. ಆರಂಭಿಕ ಉಸ್ಮಾನ್​ ಖವಾಜ (9) ಗಾಯಗೊಂಡು ನಿವೃತ್ತಿ ಹೊಂದಿದ ನಡುವೆ ಆಸೀಸ್​ 6.4 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ ಗೆಲುವಿನ ಗುರಿ ಸೇರಿತು.

ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಅಹರ್ನಿಶಿಯಾಗಿ ಬ್ರಿಸ್ಬೇನ್​ನಲ್ಲಿ ಜನವರಿ 25ರಿಂದ ನಡೆಯಲಿದೆ.

ವೆಸ್ಟ್​ ಇಂಡೀಸ್​: 188 ಮತ್ತು 35.2 ಓವರ್​ಗಳಲ್ಲಿ 120 (ಜೋಶ್ವಾ 18, ಶಮರ್​ ಜೋಸೆಫ್​ 15, ಹ್ಯಾಸಲ್​ವುಡ್​ 35ಕ್ಕೆ 5, ಸ್ಟಾರ್ಕ್​ 46ಕ್ಕೆ 2, ಲ್ಯಾನ್​ 4ಕ್ಕೆ 2), ಆಸ್ಟ್ರೆಲಿಯಾ: 283 ಮತ್ತು ವಿಕೆಟ್​ ನಷ್ಟವಿಲ್ಲದೆ 26 (ಸ್ಟೀವನ್​ ಸ್ಮಿತ್​ 11*, ಖವಾಜ 9). ಪಂದ್ಯಶ್ರೇಷ್ಠ: ಟ್ರಾವಿಸ್​ ಹೆಡ್​.