ಹೈದರಾಬಾದ್: ಸದಾ ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎದುರಿಸುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಇತ್ತೀಚಿನ ಸಂದರ್ಶನವೊಂದರಲ್ಲಿ ಲವ್ ಮ್ಯಾರೆಜ್ ಮತ್ತು ಡೇಟಿಂಗ್ ಕುರಿತಾದ ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಸಿಂಧು ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದಿರುವ ಪಿ. ವಿ. ಸಿಂಧು ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿದ್ದಾರೆ. ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆ ನಾಯಕತ್ವದಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಸಿಂಧು ಅವರು ಯೂಟ್ಯೂಬ್ ಚಾನೆಲ್ ಒಂದರೆ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ಕ್ರೀಡೆ ಹೊರತಾಗಿ ವೈಯಕ್ತಿಕ ಜೀವನದ ಪ್ರಶ್ನೆಗಳನ್ನು ಸಿಂಧು ಅವರಿಗೆ ಕೇಳಲಾಯಿತು. ಈ ವೇಳೆ ಅವರು ನೀಡಿದ ಉತ್ತರ ಮೆಚ್ಚುಗೆ ಪಾತ್ರವಾಗಿದೆ.
ನಿಮ್ಮ ರಿಲೇಶನ್ಶಿಫ್ ಸ್ಟೇಟಸ್ ಏನೆಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಸಿಂಧು, ಇಲ್ಲ ನಾನಿನ್ನೂ ಸಿಂಗಲ್ ಎಂದರು. ಸದ್ಯಕ್ಕೆ ನನಗೆ ಎಲ್ಲವೂ ಬ್ಯಾಂಡ್ಮಿಂಟನ್ ಆಗಿದೆ. ನನ್ನ ಗುರಿ ಏನಿದ್ದರೂ ಒಲಿಂಪಿಕ್ಸ್ ಎಂದು ಹೇಳಿದರು. ಜೀವನ ಸಂಗಾತಿ ಬೇಕಿತ್ತು ಅಂತಾ ಯಾವಾಗಲಾದರೂ ಅನಿಸಿದೆಯೇ ಎಂಬ ಪ್ರಶ್ನೆಗೆ, ಇಲ್ಲ ಈವರೆಗೂ ಇಂಥಾ ಆಲೋಚನೆ ಬಂದಿಲ್ಲ. ಹೌದು. ನನಗೆ ಒಬ್ಬ ಸಂಗಾತಿ ಬೇಕು. ಆದರೆ, ಇಲ್ಲಿ ಏನು ಬರೆದಿದೆಯೋ ಅದು ನಡೆಯುತ್ತದೆ ಎಂದು ತಮ್ಮ ಹಣೆಯನ್ನು ತೋರಿಸಿದರು.
ನೀವು ಯಾರೊಂದಿಗಾದರೂ ಡೇಟಿಂಗ್ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಧು, ಇಲ್ಲ ನಿಜವಾಗಿಯೂ ಇಲ್ಲ. ಸದ್ಯಕ್ಕೆ ನಾನು ನನ್ನ ಜೀವನದಲ್ಲಿ ಸಂತೋಷವಾಗಿದ್ದೇನೆ. ಒಳ್ಳೆಯ ಫ್ರೆಂಡ್ಸ್ ಇದ್ದಾರೆ. ಸದ್ಯಕ್ಕೆ ಒಲಿಂಪಿಕ್ಸ್ ಅಷ್ಟೇ ನನ್ನ ಮನಸ್ಸಿನಲ್ಲಿ ಇರುವುದು ಎಂದರು.
ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಸಿಂಧು ಗಾಯದ ಸಮಸ್ಯೆಯಿಂದ 5 ತಿಂಗಳ ಕಾಲ ಹೊರಗುಳಿದಿದ್ದರು. ಇದಾದ ನಂತರ ಆಡಿದ ಎಲ್ಲಾ ಟೂರ್ನಿಗಳಲ್ಲಿ ಹಿಂದಿನ ರೀತಿ ಅಮೋಘ ಆಟ ಪ್ರದರ್ಶಿಸಲಾಗಲಿಲ್ಲ. ಯುಎಸ್ ಓಪನ್ ಮತ್ತು ಕೆನಡಾ ಓಪನ್ನಲ್ಲಿ ಸಿಂಧು ಕ್ವಾರ್ಟರ್ ಫೈನಲ್ನಲ್ಲಿ ಸೋತರು. ಸದ್ಯ ಪ್ರಕಾಶ್ ಪಡುಕೋಣೆ ಬಳಿ ತರಬೇತಿ ಪಡೆಯುತ್ತಿರುವ ಸಿಂಧು, 2024ರ ಒಲಿಂಪಿಕ್ಸ್‌ನಲ್ಲಿ ಬಲಿಷ್ಠ ಪುನರಾಗಮನದೊಂದಿಗೆ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. (ಏಜೆನ್ಸೀಸ್)