More

    IPL​ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಬಿಕರಿಯಾಗಬಲ್ಲ ಆಟಗಾರರಿವರು! ಕನಿಷ್ಠ 10 ಕೋಟಿ ರೂ. ಗ್ಯಾರೆಂಟಿ

    ನವದೆಹಲಿ: ಮುಂಬರುವ ಐಪಿಎಲ್​ ಮಿನಿ ಹರಾಜಿನ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈಗಾಗಲೇ ಎಲ್ಲ 10 ಫ್ರಾಂಚೈಸಿಗಳು ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದು, ತಮ್ಮ ತಂಡಗಳಿಗೆ ಪ್ರಭಾವಿ ಆಟಗಾರರನ್ನು ಸೆಳೆದುಕೊಳ್ಳಲು ಲೆಕ್ಕಾಚಾರ ನಡೆಸುತ್ತಿವೆ. ಇದರ ನಡುವೆ ಈ ಬಾರಿಯ ಹರಾಜಿನಲ್ಲಿ ಯಾರೆಲ್ಲ ಆಟಗಾರರು 10 ಕೋಟಿ ರೂ. ದಾಖಲೆ ಮೊತ್ತಕ್ಕೆ ಸೇಲಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ, ಆ ಆಟಗಾರರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಟ್ರಾವಿಸ್​ ಹೆಡ್​
    ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಮಿಂಚಿದ ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​ ಮೇಲೆ ಐಪಿಎಲ್​ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆರಂಭಿಕ ಸ್ಥಾನಕ್ಕೆ ಮಾತ್ರವಲ್ಲದೆ, ಮೂರು ಮತ್ತು ನಾಲ್ಕನೇ ಕ್ರಮಾಂಕಕ್ಕೂ ಹೆಡ್​ ಸೂಕ್ತ. ಸ್ಫೋಟಕ ಆರಂಭಿಕ ಆಟಗಾರನನ್ನು ಹುಡುಕುತ್ತಿರುವ ತಂಡಗಳು ಹೆಡ್​ಗಾಗಿ ಹರಾಜಿನಲ್ಲಿ ಪೈಪೋಟಿ ನಡೆಸಬಹುದು. ಈ ಸಾಲಿನಲ್ಲಿ ಸನ್​ ರೈಸರ್ಸ್​ ಹೈದರಾಬಾದ್​, ಪಂಜಾಬ್​ ಕಿಂಗ್​ ಮತ್ತು ಕೋಲ್ಕತ ನೈಟ್​ ರೈಡರ್ಸ್​ ತಂಡಗಳಿವೆ.

    ರಾಚಿನ್​ ರವೀಂದ್ರ
    ವಿಶ್ವಕಪ್​ನಲ್ಲಿ ಎಲ್ಲರ ಗಮನ ಸೆಳೆದ ವಿದೇಶಿ ಆಟಗಾರ ಯಾರೆಂದರೆ ನ್ಯೂಜಿಲೆಂಡ್​ ತಂಡದ ಆಲ್​ರೌಂಡರ್​ ರಚಿನ್​ ರವೀಂದ್ರ. ಒಳ್ಳೆಯ ಯುವ ಪ್ರತಿಭೆ. ವಿಶ್ವಕಪ್​ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು. ಬೌಲಿಂಗ್​ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ವಿಶ್ವಕಪ್​ನಲ್ಲಿ 24 ವರ್ಷದ ರಚಿನ್​ 578ರನ್​ ಗಳಿಸುವ ಮೂಲಕ ಅತ್ಯಧಿಕ ರನ್​ ಗಳಿದ ಬ್ಯಾಟರ್​ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಐಪಿಎಲ್​ ಹರಾಜಿನಲ್ಲಿ ರಚಿನ್​ ಮೇಲೆ ಎಲ್ಲ ತಂಡಗಳು ಕಣ್ಣಿಟ್ಟಿವೆ. ಆಲ್​ರೌಂಡರ್​ ಆಗಿರುವುದರಿಂದ ತೀವ್ರ ಪೈಪೋಟಿ ನಡೆಯಲಿದ್ದು, ಭಾರಿ ಮೊತ್ತಕ್ಕೆ ಬಿಕರಿಯಾದರೆ ಅಚ್ಚರಿ ಪಡಬೇಕಿಲ್ಲ. ಅಂದಹಾಗೆ ರಚಿನ್​ ಮೂಲ ಕರ್ನಾಟಕ. ಬೆಂಗಳೂರಿನಲ್ಲಿ ಅವರ ಕುಟುಂಬ ಇನ್ನೂ ನೆಲೆಸಿದೆ. ಆರ್​ಸಿಬಿ ಮೇಲೆ ರಚಿನ್​ ವಿಶೇಷ ಒಲವಿದೆ. ಆದರೆ, ಹರಾಜಿನಲ್ಲಿ ಯಾರ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

    ಮಿಚೆಲ್​ ಸ್ಟಾರ್ಕ್​
    ದೀರ್ಘ ಸಮಯದ ಬಳಿಕ ಮಿಚೆಲ್​ ಸ್ಟಾರ್ಕ್​ ಐಪಿಎಲ್​ ಹರಾಜಿಗೆ ಮರಳಿದ್ದಾರೆ. 2015ರಲ್ಲಿ ಕೊನೆಯದಾಗಿ ಐಪಿಎಲ್​ ಆಡಿದರು. ಆಗ ಆರ್​ಸಿಬಿ ತಂಡದ ಭಾಗವಾಗಿದ್ದರು. ಇದೇ ಫ್ರಾಂಚೈಸಿಯಿಂದ ಸ್ಟಾರ್ಕ್ ಹೆಚ್ಚಿನ ಬಿಡ್‌ ಪಡೆಯುವ ಸಾಧ್ಯತೆಯಿದೆ. ಏಕೆಂದರೆ, ಆರ್​ಸಿಬಿ ತನ್ನ ಎಲ್ಲ ವೇಗಿಗಳನ್ನು ಬಿಡುಗಡೆ ಮಾಡಿದ್ದು, ಅನುಭವಿ ವೇಗಿಯ ಅಗತ್ಯವಿದೆ. ಹೀಗಾಗಿ ಸ್ಟಾರ್ಕ್​ ಮೇಲೆ ಆರ್​ಸಿಬಿ ಕಣ್ಣಿದೆ. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡವೂ ಸಹ ಸ್ಟಾರ್ಕ್​ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಏಕೆಂದರೆ, ಮುಂಬೈ ಕೂಡ ಜೋಫ್ರಾ ಆರ್ಚರ್ ಅವರನ್ನು ಬಿಡುಗಡೆ ಮಾಡಿರುವುದರಿಂದ ಜಸ್​ಪ್ರಿತ್​ ಬುಮ್ರಾಗೆ ಸಾಥ್​ ನೀಡಲು ಮತ್ತೊಬ್ಬ ವೇಗಿ ಬೇಕಿದೆ. ಇನ್ನು ಹೆಚ್ಚಿನ ತಂಡಗಳು ಸ್ಟಾರ್ಕ್​ ಮೇಲೆ ಕಣ್ಣಿಟ್ಟರೆ ಹುಬ್ಬೇರುವ ಮೊತ್ತಕ್ಕೆ ಸ್ಟಾರ್ಕ್​ ಬಿಕರಿಯಾದರೂ ಅಚ್ಚರಿ ಪಡಬೇಕಿಲ್ಲ.

    ಡರೈಲ್​ ಮಿಚೆಲ್​
    ನ್ಯೂಜಿಲೆಂಡ್​ನ ಮತ್ತೊಬ್ಬ ಸ್ಟಾರ್​ ಆಟಗಾರ ಡರೈಲ್​ ಮಿಚೆಲ್​ ಮೇಲೂ ಐಪಿಎಲ್​ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಬಲವಾದ ಇನಿಂಗ್ಸ್​ ಕಟ್ಟಿ ಇದ್ದಕ್ಕಿದ್ದಂತೆ ಸ್ಫೋಟಕ ಆಡುವಲ್ಲಿ ಮಿಚೆಲ್​ ಮಾಸ್ಟರ್​ ಕ್ಲಾಸ್​ ಎಂಬುದನ್ನು ವಿಶ್ವಕಪ್​ನಲ್ಲಿ ಸಾಬೀತಾಗಿದೆ. ಅಲ್ಲದೆ, ಮಿಚೆಲ್​ ಬೌಲಿಂಗ್​ ಕೂಡ ಉತ್ತಮವಾಗಿ ಮಾಡುತ್ತಾರೆ. ಕ್ಷೇತ್ರ ರಕ್ಷಣೆಯಲ್ಲಿಯೂ ಗಮನ ಸೆಳೆದಿದ್ದಾರೆ. ಒಂದೊಳ್ಳೆ ಆಲ್​ರೌಂಡರ್​ ಆಗಿರುವುದರಿಂದ ಹರಾಜಿನಲ್ಲಿ ಭಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ. ಪಂಜಾಬ್​ ಕಿಂಗ್ಸ್​, ಕೋಲ್ಕತ ನೈಟ್​ ರೈಡರ್ಸ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ತಂಡಗಳಿಗೆ ಒಂದು ಉತ್ತಮ ಆಯ್ಕೆ ಎನ್ನಬಹುದು. ಡರೈಲ್​ ಮಿಚೆಲ್​ ಅವರು ಒಂದೊಳ್ಳೆ ನಾಯಕನ ಗುಣವನ್ನು ಹೊಂದಿದ್ದಾರೆ.

    ಉಳಿದಂತೆ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೋಟ್ಜಿ ಮೇಲೂ ಫ್ರಾಂಚೈಸಿಗಳ ಕಣ್ಣಿದೆ. ವಿಶ್ವಕಪ್​ನಲ್ಲಿ ಅಮೋಘ ಪ್ರದರ್ಶನದೊಂದಿಗೆ 20 ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯಾಗೆ 6ನೇ ವಿಶ್ವಕಪ್ ತಂದುಕೊಟ್ಟ ನಾಯಕ ಪ್ಯಾಟ್​ ಕಮ್ಮಿನ್ಸ್​ ಮೇಲೆಯೂ ಫ್ರಾಂಚೈಸಿಗಳ ಕಣ್ಣಿದೆ.

    1166 ಆಟಗಾರರ ನೋಂದಣಿ
    ಏಕದಿನ ವಿಶ್ವಕಪ್​ ವಿಜೇತ ಆಸ್ಟ್ರೆಲಿಯಾ ತಂಡದ ತಾರೆಯರಾದ ಟ್ರಾವಿಸ್​ ಹೆಡ್​, ನಾಯಕ ಪ್ಯಾಟ್​ ಕಮ್ಮಿನ್ಸ್​ ಮತ್ತು ಮಿಚೆಲ್​ ಸ್ಟಾರ್ಕ್​ ಸಹಿತ 1,166 ಆಟಗಾರರು ಮುಂಬರುವ ಐಪಿಎಲ್​ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರಾಗಿದ್ದರೆ, 336 ವಿದೇಶೀಯರಾಗಿದ್ದಾರೆ. ಐಪಿಎಲ್​ ಹರಾಜು ಪ್ರಕ್ರಿಯೆ ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿದ್ದು, 10 ತಂಡಗಳು ಒಟ್ಟಾರೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್​ ಕೂಡ ಹೊಂದಿವೆ. (ಏಜೆನ್ಸೀಸ್​)

    ಐಪಿಎಲ್​​ ಹರಾಜು 2024: ಆರ್​ಸಿಬಿಯ ಲೆಕ್ಕಾಚಾರವೇನು? ಯಾರ ಮೇಲೆ ಕಣ್ಣಿಟ್ಟಿದೆ ಫಾಫ್ ಪಡೆ?

    ಕಿಂಚಿತ್ತು ಮಾನ-ಮರ್ಯಾದೆ ಇದ್ರೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಲಿ: ತೇಜಸ್ವಿ ಸೂರ್ಯ ವಿರುದ್ಧ ಸಿಎಂ ಸಿದ್ದು ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts