More

    ಕಿಂಚಿತ್ತು ಮಾನ-ಮರ್ಯಾದೆ ಇದ್ರೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಲಿ: ತೇಜಸ್ವಿ ಸೂರ್ಯ ವಿರುದ್ಧ ಸಿಎಂ ಸಿದ್ದು ಕಿಡಿ

    ಬೆಂಗಳೂರು: ಹುತಾತ್ಮ ವೀರಯೋಧ ಪ್ರಾಂಜಲ್ ಕುರಿತ ನನ್ನ ಹೇಳಿಕೆಯ ವಿಡಿಯೋವನ್ನು ಬೇಕಂತಲೇ ತಿರುಚಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಮಯ್ಯ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತಿರುಚಿದೆ ಎನ್ನಲಾದ ವಿಡಿಯೋದ ಸಂಪೂರ್ಣ ಕ್ಲಿಪ್ಪಿಂಗ್ ಅನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು, ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂತು. ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲದೆ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜಲ್​ ಅವರ ಕುಟುಂಬಕ್ಕೆ ನೀಡಿದ್ದಾರೆ.

    ಪತ್ರಕರ್ತರ ಮುಂದೆ ನಾನು ನೀಡಿರುವ ಹೇಳಿಕೆಯ ಪೂರ್ಣ ವಿಡಿಯೋವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ-ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ.

    ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು ಮಾತ್ರ ಎನ್ನುವುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಹುತಾತ್ಮ ಪ್ರಾಂಜಲ್ ಅವರ ಮೃತದೇಹವನ್ನು ಇಲ್ಲಿಗೆ ತಂದಿದ್ದ ದಿನ ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಅಂತಿಮ ದರ್ಶನ ಮಾಡಿ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದನ್ನು ನಾವು ವಿವಾದ ಮಾಡಲು ಹೋಗಲಿಲ್ಲ. ಆದರೆ ಈ ಸಂಸದ ಒಬ್ಬ ವೀರ ಯೋಧನ ಬಲಿದಾನವನ್ನು ಕೂಡಾ ತನ್ನ ಸುಳ್ಳು ಸುದ್ದಿಯ ಫ್ಯಾಕ್ಟರಿಗೆ ಸರಕಾಗಿ ಮಾಡಿ ನನ್ನ ಮಾನಹಾನಿಗೆ ಪ್ರಯತ್ನಿಸಿರುವುದು ಅಕ್ಷಮ್ಯ. ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ತೇಜಸ್ವಿ ಸೂರ್ಯ ಪ್ರತಿಕ್ರಿಯೆ
    ಸಿಎಂ ಸಿದ್ದರಾಮಯ್ಯ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ಮಾನ್ಯ ಶ್ರೀ ಸಿದ್ದರಾಮಯ್ಯ ಸರ್, ಯೋಧರೊಬ್ಬರು ತೀರಿಕೊಂಡು 12 ದಿವಸಗಳಾದರೂ ನಿಮ್ಮ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸದೇ ಇದ್ದಿದ್ದು ಸತ್ಯ. ನಾನು ನಿಮಗೆ ಪತ್ರ ಬರೆದು ಜ್ಞಾಪಿಸುವವರೆಗೂ ಪರಿಹಾರ ನೀಡಲು ತಾವುಗಳು ಮೀನಾಮೇಷ ಎಣಿಸಿದ್ದು ಕೂಡ ಸತ್ಯ. ಮಾಧ್ಯಮದ ಸ್ನೇಹಿತರು ತಮ್ಮನ್ನು ಪ್ರಶ್ನಿಸಿದಾಗ, ಸರಿಯೋ ತಪ್ಪೋ ನೀವು ಪರಿಹಾರವನ್ನೇ ಘೋಷಿಸಿಲ್ಲ ಎಂದು ಹೇಳಿರುವುದು ಸಹ ಸತ್ಯ. ನಂತರದಲ್ಲಿ ನಾನು ಪತ್ರಿಕಾಗೋಷ್ಠಿ ನಡೆಸಿ ಆಗ್ರಹ ಪಡಿಸುವವರೆಗೂ ತಾವು ಪರಿಹಾರ ಘೋಷಣೆ ಮಾಡದೇ ಇದ್ದಿದ್ದು ಕೂಡ ಸತ್ಯ. ಎರಡನೇ ಬಾರಿ ನಾನು ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಆಗ್ರಹ ಮಾಡಿದ ನಂತರ, ಮಾಧ್ಯಮ ಮತ್ತು ಸಾರ್ವಜನಿಕರ ನಿರಂತರ ಒತ್ತಡದ ನಂತರವೇ ನಿನ್ನೆ ತಡರಾತ್ರಿ ತಾವು ಪರಿಹಾರ ಘೋಷಿಸಿದ್ದು ಕೂಡ ಸತ್ಯ. ಇದು ರಾಜಕೀಯ ಮಾಡುವ ವಿಷಯವಂತೂ ಖಂಡಿತ ಅಲ್ಲ. ಒಟ್ಟಿನಲ್ಲಿ ಹುತಾತ್ಮ ಯೋಧ ಕ್ಯಾಪ್ಟನ್​ ಪ್ರಾಂಜಲ್ ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಿರುವುದು ಸಂತಸದ ವಿಷಯ. ಧನ್ಯವಾದಗಳು. ಇದರೊಂದಿಗೆ ಆನೇಕಲ್ ತಾಲ್ಲೂಕಿನ ಜಿಗಣಿ ಪ್ರದೇಶದ ಮುಖ್ಯ ರಸ್ತೆಯನ್ನು, ಕ್ಯಾಪ್ಟನ್ ಎಂ.ವಿ. ಪ್ರಾಂಜಲ್, ಹೆಸರಿನಲ್ಲಿ ನಾಮಕರಣಗೊಳಿಸುವಂತೆ ಮನವಿ ಕೂಡ ಸಲ್ಲಿಸಿದ್ದು, ಈ ಮನವಿಗೆ ಶೀಘ್ರ ಸ್ಪಂದನೆ ಒದಗಿಸಿ ಹುತಾತ್ಮ ಯೋಧರೊಬ್ಬರಿಗೆ ಗೌರವ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.

    ಇದಕ್ಕೂ ಮುನ್ನ ನಿನ್ನೆ (ಡಿ.4) ಸಂಜೆ ತೇಜಸ್ವಿ ಸೂರ್ಯ ವಿಡಿಯೋ ತುಣುಕೊಂದನ್ನು ಶೇರ್​ ಮಾಡಿಕೊಂಡಿದ್ದರು. ಕಳೆದ ಭಾನುವಾರ ಪತ್ರಕರ್ತರು ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಘೋಷಣೆ ಮಾಡಿರುವ ಪರಿಹಾರದ ಕುರಿತಾಗಿ ಪ್ರಶ್ನೆ ಕೇಳಿದಾಗ ಯಾವಾಗ ಘೋಷಣೆ ಮಾಡಿದೆವು ಎಂದು ಹೇಳಿರುವುದು ವಿಡಿಯೋದಲ್ಲಿತ್ತು. ಈ ಬಗ್ಗೆ ತೇಜಸ್ವಿ ಸೂರ್ಯ ಮಾತನಾಡಿ, ಮುಖ್ಯಮಂತ್ರಿಯೊಬ್ಬರು ಕ್ಯಾಪ್ಟನ್ ಪ್ರಾಂಜಲ್ ಅವರ ತ್ಯಾಗದ ಬಗ್ಗೆ ಅಹಂಕಾರ ಮತ್ತು ಕೃತಜ್ಞತೆಯಿಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಪ್ರಾಂಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಾಗ ನಾನು ನಿಮಗೆ ಪರಿಹಾರವನ್ನು ಕೇಳಿದ್ದೆ ಮತ್ತು ಮಾಧ್ಯಮಗಳು ವರದಿ ಮಾಡಿದಂತೆ ನೀವು ಪರಿಹಾರವನ್ನು ಘೋಷಿಸಿದ್ದೀರಿ. ಎರಡು ದಿನಗಳ ಹಿಂದೆ ನಾನು ಕ್ಯಾಪ್ಟನ್ ಪ್ರಾಂಜಲ್ ಅವರ ಪೋಷಕರನ್ನು ವಿಚಾರಿಸಲು ಕರೆ ಮಾಡಿದಾಗ, ರಾಜ್ಯ ಸರ್ಕಾರದ ಯಾವುದೇ ಅಧಿಕಾರಿ ಕುಟುಂಬವನ್ನು ಸಂಪರ್ಕಿಸಿರಲಿಲ್ಲ. ಪ್ರಾಂಜಲ್ ಅವರ ತ್ಯಾಗಕ್ಕೆ ಕೃತಜ್ಞರಾಗಿರುವ ನಾಗರಿಕನಾಗಿ ನಾನು ನಿಮ್ಮ ಗಂಭೀರ ಕರ್ತವ್ಯವನ್ನು ನೆನಪಿಸಿದ್ದೇನೆ. ನೀವು ಯಾರಿಗೂ ಯಾವುದೇ ಉಪಕಾರ ಮಾಡುತ್ತಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಪ್ರತಿಯೊಂದಕ್ಕೂ ನಿಷ್ಠುರವಾಗಿರುವುದನ್ನು ನಿಲ್ಲಿಸಿ ಮತ್ತು ಈ ವಿಷಯವನ್ನು ರಾಜಕೀಯಗೊಳಿಸದೆ ಸರಿಯಾದದ್ದನ್ನು ಮಾಡಿ ಎಂದಿದ್ದರು. ಇದೀಗ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಪೂರ್ತಿ ವಿಡಿಯೋ ಶೇರ್​ ಮಾಡಿಕೊಂಡು ಸ್ಪಷ್ಟನೆ ನೀಡುವ ಜತೆಗೆ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನೀರು, ವಿದ್ಯುತ್, ಮೊಬೈಲ್​ ಸಿಗ್ನಲ್​ಗಳಿಲ್ಲದೆ 24 ಗಂಟೆ ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ಆಮೀರ್​ ಖಾನ್​ ರಕ್ಷಣೆ!

    ಮಿಚೌಂಗ್​ ಚಂಡಮಾರುತದ ಅಬ್ಬರ; ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts