ಕ್ರೀಡೆ

ನ್ಯಾಯಯುತವಾಗಿ... ವಿರಾಟ್​, ರೋಹಿತ್ ನಿವೃತ್ತಿಯ ಕುರಿತು ಕೋಚ್​ Gautam Gambhir ಮಾರ್ಮಿಕ ನುಡಿ

ಸಿಡ್ನಿ: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಬಾರ್ಡರ್​-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್​ ಸರಣಿಯಲ್ಲಿ ಭಾರತ ತಂಡ 1-3 ಅಂತರದಿಂದ ಸೋಲುಂಡಿದ್ದು, ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಟಿಕೆಟ್​ ಮಿಸ್​ ಮಾಡಿಕೊಂಡಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 295 ರನ್​ಗಳ ಭರ್ಜರಿ ಜಯಗಳಿಸಿದ್ದು ಬಿಟ್ಟರೆ ಟೀಮ್​ ಇಂಡಿಯಾ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, 10 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ಸೋಲುಂಡಿದೆ.

ಇನ್ನೂ ಭಾರತ ತಂಡದ ಪ್ರದರ್ಶನಕ್ಕೆ ಬರುವುದಾದರೆ ಹಿರಿಯ ಆಟಗಾರರಾದ ರೋಹಿತ್ ಹಾಗೂ ವಿರಾಟ್​ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ನಿರೀಕ್ಷೆ ಮೂಡಿಸಿದ್ದ ಈ ಇಬ್ಬರು ಆಟಗಾರರು ಭಾರೀ ನಿರಾಸೆ ಮೂಡಿಸಿದ್ದು, ಸರಣಿ ಮುಗಿದ ಬೆನ್ನಲ್ಲೇ ಇವರುಗಳ ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಕೋಚ್ ಗೌತಮ್​ ಗಂಭೀರ್ (Gautam Gambhir)​ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿರುವ ಗಂಭೀರ್ (Gautam Gambhir)​, ಯಾವುದೇ ಆಟಗಾರರ ಭವಿಷ್ಯದ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ, ಅದು ಅವರಿಗೆ ಬಿಟ್ಟದ್ದು. ಅವರಿಗೆ ಹಸಿವು ಮತ್ತು ಬದ್ಧತೆ ಇದೆ - ಆಶಾದಾಯಕವಾಗಿ ಅವರು ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲವನ್ನೂ ಮಾಡಬಹುದು. ಡ್ರೆಸ್ಸಿಂಗ್ ರೂಮ್​ನಲ್ಲಿ ವಾತಾವರಣ ಚೆನ್ನಾಗಿರಬೇಕೆಂದರೆ ನಾನು ಎಲ್ಲರಿಗೂ ಪ್ರಾಮಾಣಿಕ ಮತ್ತು ನ್ಯಾಯಯುತವಾಗಿರಬೇಕು ಎಂದು ಗಂಭೀರ್​ (Gautam Gambhir) ವಿರಾಟ್​ ಹಾಗೂ ರೋಹಿತ್​ ನಿವೃತ್ತಿ ಕುರಿತು ಹೇಳಿದ್ದಾರೆ. 

ಇನ್ನೂ ಸಿಡ್ನಿ ಟೆಸ್ಟ್​ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 185 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 157 ರನ್​ಗಳನ್ನು ಗಳಿಸಿತ್ತು. ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾದ ಮೇಲೆ ಹಿಡಿತ ಸಾಧಿಸಿದ್ದ ಭಾರತ ತಂಡವು ಎರಡನೇ ಇನ್ನಿಂಗ್ಸ್​ನಲ್ಲಿ ನಿರೀಕ್ಷಿತ ಪ್ರದರ್ಶವನನ್ನು ನೀಡುವಲ್ಲಿ ವಿಫಲವಾಯಿತು. ಅಂತಿಮವಾಗಿ ಆಸ್ಟ್ರೇಲಿಯಾದ ವಿರುದ್ಧ 6 ವಿಕೆಟ್​ಗಳ ಸೋಲನ್ನು ಕಂಡಿತ್ತು.