ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭುವನ್ ರಾಜು (59*ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ 7 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಮಯಾಂಕ್ ಅಗರ್ವಾಲ್ ಬಳಗಕ್ಕೆ ಇದು ಹ್ಯಾಟ್ರಿಕ್ ಗೆಲುವಾಗಿದ್ದರೆ, ಶಿವಮೊಗ್ಗ ತಂಡ ಸತತ 3ನೇ ಸೋಲಿನ ಕಹಿ ಎದುರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಶಿವಮೊಗ್ಗ, ಯುವ ಆಲ್ರೌಂಡರ್ ಹಾರ್ದಿಕ್ ರಾಜ್ (69 ರನ್, 33 ಎಸೆತ, 5 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟದ ಬಲದಿಂದ 9 ವಿಕೆಟ್ಗೆ 163 ರನ್ ಪೇರಿಸಿತು. ಶಿವಮೊಗ್ಗ ಒಂದು ಹಂತದಲ್ಲಿ 79 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿತು. ನಾಯಕ ನಿಹಾಲ್ ಉಲ್ಲಾಳ್ (8) ಮತ್ತು ಐಪಿಎಲ್ ತಾರೆ ಅಭಿನವ್ ಮನೋಹರ್ (5) ಬೇಗನೆ ಔಟಾಗಿ ನಿರಾಸೆ ಮೂಡಿಸಿದರು. ಆಗ 18 ವರ್ಷದ ಹಾರ್ದಿಕ್ ರಾಜ್ ದಿಟ್ಟ ಆಟವಾಡಿ ಮೊತ್ತ ಏರಿಸಿದರು. ಪ್ರತಿಯಾಗಿ ಬೆಂಗಳೂರು ತಂಡ ನಾಯಕ ಮಯಾಂಕ್ ಅಗರ್ವಾಲ್ (42) ಮತ್ತು ಭುವನ್ ರಾಜು ಸಾಹಸದಿಂದ 17.2 ಓವರ್ಗಳಲ್ಲಿ 3 ವಿಕೆಟ್ಗೆ 168 ರನ್ ಪೇರಿಸಿ ಜಯಿಸಿತು.
ಶಿವಮೊಗ್ಗ ಲಯನ್ಸ್: 9 ವಿಕೆಟ್ಗೆ 163 (ಭರತ್ ಧುರಿ 29, ನಿಹಾಲ್ 8, ಅಭಿನವ್ ಮನೋಹರ್ 5, ಶುಭಾಂಗ್ 32ಕ್ಕೆ 2, ಲವಿಶ್ ಕೌಶಲ್ 33ಕ್ಕೆ 2). ಬೆಂಗಳೂರು ಬ್ಲಾಸ್ಟರ್ಸ್: 17.2 ಓವರ್ಗಳಲ್ಲಿ 3 ವಿಕೆಟ್ಗೆ 168 (ಚೇತನ್ 23, ಮಯಾಂಕ್ 42, ಭುವನ್ 59*, ಸೂರಜ್ 23, ಆನಂದ್ 23ಕ್ಕೆ 2).
ಸೋಮವಾರದ ಪಂದ್ಯಗಳು
ಬೆಂಗಳೂರು ಬ್ಲಾಸ್ಟರ್ಸ್-ಹುಬ್ಬಳ್ಳಿ ಟೈಗರ್ಸ್
ಆರಂಭ: ಮಧ್ಯಾಹ್ನ 3.00
ಮೈಸೂರು ವಾರಿಯರ್ಸ್-ಮಂಗಳೂರು ಡ್ರ್ಯಾಗನ್ಸ್
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್