ಕ್ರೀಡೆ

ಪದಾರ್ಪಣೆ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ Harshit Rana; ಟೀಮ್​ ಇಂಡಿಯಾ ಪರ 50 ವರ್ಷದಲ್ಲಿ ಈ ಸಾಧನೆ ಮಾಡಿದ ಮೊದಲಿಗರು ಇವರೇ

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ ಭಾರತ (Team India) ಹಾಗೂ ಇಂಗ್ಲೆಂಡ್​ (England) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 4 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಉತ್ತಮ ಆರಂಭ ಪಡೆದಿದ್ದು, ಪ್ರವಾಸಿ ತಂಡಕ್ಕೆ ಮತ್ತೊಮ್ಮೆ ಸೋಲಿನ ಆಘಾತವನ್ನು ನೀಡಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ಇಂಗ್ಲೆಂಡ್​ ತಂಡಕ್ಕೆ ನಾಯಕ ಜೋಸ್​ ಬಟ್ಲರ್ (52 ರನ್, 67 ಎಸೆತ, 4 ಬೌಂಡರಿ) ಜೇಕಬ್​ ಬೆಥೆಲ್ (51 ರನ್, 64 ಎಸೆತ, 3 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 47.4 ಓವರ್​ಗಳಲ್ಲಿ 248 ರನ್​ಗಳಿಗೆ ಆಲೌಟ್​ ಆಯಿತು. ಗುರಿ ಬೆನ್ನತ್ತಿದ್ದ ಟೀಮ್​ ಇಂಡಿಯಾ (Team India) ಪರ ಶುಭಮನ್​ ಗಿಲ್​ (87 ರನ್, 96 ಎಸೆತ, 14 ಬೌಂಡರಿ), ಶ್ರೇಯಸ್​ ಅಯ್ಯರ್​ (59 ರನ್, 36 ಎಸೆತ, 9 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್​ (52 ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್​) ಅರ್ಧಶತಕಗಳ ಫಲವಾಗಿ ಗುರಿಯನ್ನು 6 ವಿಕೆಟ್ ನಷ್ಟಕ್ಕೆ 38.4 ಓವರ್​ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​ ತಂಡಕ್ಕೆ ಆರಂಭಿಕರಾದ ಫಿಲ್​ ಸಾಲ್ಟ್​ (43 ರನ್​, 26 ಎಸೆತ, 5 ಬೌಂಡರಿ, 3 ಸಿಕ್ಸರ್​) ಬೆನ್​ ಡಕೆಟ್​ (32 ರನ್​, 29 ಎಸೆತ, 6 ಬೌಂಡರಿ) 9 ಓವರ್​ನ ಮುಕ್ತಾಯಕ್ಕೆ 73 ರನ್​ ಜತೆಯಾಟವಾಡಿ ಬೃಹತ್​ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿತ್ತು. ಈ ಸಮಯದಲ್ಲಿ ಕೈಚಳಕ ತೋರಿದ ಟೀಮ್​ ಇಂಡಿಯಾದ (Team India) ವೇಗಿಗಳು ಆಂಗ್ಲರಿಗೆ ಡಗೌಟ್​ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ಟೀಮ್​ ಇಂಡಿಯಾ ಪರ ಹರ್ಷಿತ್​ ರಾಣಾ, ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದರೆ ಕುಲ್​ದೀಪ್ ಯಾದವ್​, ಅಕ್ಸರ್ ಪಟೇಲ್​ ಮತ್ತು ಮೊಹಮ್ಮದ್​ ಶಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಯುವ ವೇಗಿ ಹರ್ಷಿತ್​ ರಾಣಾ (Harshit Rana) ಏಕದಿನ ಪದಾರ್ಪಣೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲ್ ಮಾಡಿದ ರಾಣಾ 53 ರನ್ ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.

ಭಾರತದ ಪರ ಮೂರು ಮಾದರಿಗಳಲ್ಲಿ ಪದಾರ್ಪಣೆ ಮಾಡಿರುವ ಹರ್ಷಿತ್​ ರಾಣಾ (Harshit Rana) ತಮ್ಮ ಮೊದಲ ಪಂದ್ಯದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1974ರ ಬಳಿಕ ಭಾರತೀಯ ಕ್ರಿಕೆಟಿಗರೊಬ್ಬರು ಈ ಸಾಧನೆಯನ್ನು ಮಾಡಿದ್ದು, ಹರ್ಷಿತ್​ ರಾಣಾ ಈ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ.

2024ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಹರ್ಷಿತ್​ ರಾಣಾ (Harshit Rana) ತಾವಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್​ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಕನ್​ಕಷನ್ ನಿಯಮದಡಿ ಪದಾರ್ಪಣೆ ಮಾಡಿದ್ದ ಹರ್ಷಿತ್​ ಮೂರು ವಿಕೆಟ್​ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಏಕದಿನ ಮಾದರಿಯಲ್ಲು ಮೂರು ವಿಕೆಟ್​ ಪಡೆಯುವ ಮೂಲಕ ಹರ್ಷಿತ್​ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದಾರೆ.