ಕ್ರೀಡೆ

ಅಬ್ಬಾ ಎಂಥಾ ಕ್ಯಾಚ್​... ಹರ್ಷಲ್ ಪಟೇಲ್ ಅದ್ಭುತ ಕ್ಯಾಚ್​ಗೆ ಬೆರಗಾದ ಕ್ರೀಡಾ ಜಗತ್ತು! ವಿಡಿಯೋ ವೈರಲ್ | Harshal Patel

Harshal Patel: ನಿನ್ನೆ (ಏ.03) ನಡೆದ ಕೆಕೆಆರ್​ ಮತ್ತು ಎಸ್​ಆರ್​ಎಚ್ ನಡುವಿನ 14ನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಅಂಗಕ್ರಿಶ್ ರಘುವಂಶಿ (50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (60 ರನ್, 29 ಎಸೆತ, 7 ಬೌಂಡರಿ, 3 ಸಿಕ್ಸರ್) ಜತೆಗೆ ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 80 ರನ್‌ಗಳ ಬೃಹತ್ ಗೆಲುವು ದಾಖಲಿಸಿತು.

'ಒನ್​ ಸೈಡೆಡ್​ ಮ್ಯಾಚ್​' ಎಂಬ ಮಾತು ನಿನ್ನೆಯ ಪಂದ್ಯದಲ್ಲಿ ಮರುಕುಳಿದ್ದು ಕ್ರಿಕೆಟ್​ ಪ್ರಿಯರಲ್ಲಿ ಬೇಸರ ಮೂಡಿಸಿತು. ಕಾರಣ, ಭಾರೀ ಅಂತರದಲ್ಲಿ ಕೆಕೆಆರ್ ಎದುರು ಮಂಡಿಯೂರಿದ ಎಸ್​ಆರ್​ಎಚ್​, ರೋಚಕತೆಗೆ ಸಾಕ್ಷಿಯಾಗುವುದಿರಲಿ, ಗೆಲುವಿನ ಸಮೀಪಕ್ಕೂ ಸುಳಿಯಲಿಲ್ಲ ಎಂಬ ನಿರಾಶೆ. ಅಜಿಂಕ್ಯ ರಹಾನೆ ಪಡೆ ಗೆಲುವಿನ ಹಳಿ ಏರಿದರೆ, ಟೂರ್ನಿಯಲ್ಲಿ ಸತತ 3ನೇ ಸೋಲಿಗೆ ತುತ್ತಾದ ಪ್ಯಾಟ್ ಕಮ್ಮಿನ್ಸ್ ಪಡೆ ಐಪಿಎಲ್​ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಜಾರಿದೆ.

ಇನ್ನು ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಬೌಲರ್​ ಹರ್ಷಲ್ ಪಟೇಲ್ ಹಿಡಿದ ಆ ಅದ್ಭುತ ಕ್ಯಾಚ್​. ಈಡೆನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಂಗಕ್ರಿಶ್ ರಘುವಂಶಿ ಬಾರಿಸಿದ ಬಾಲ್​ ಹಿಡಿಯಲು ಭಾರೀ ಶ್ರಮವಹಿಸಿದ ಹರ್ಷಲ್​, ಓಡುತ್ತಲೇ ಜಿಗಿದು ಹಿಡಿದ ಕ್ಯಾಚ್​ ನೋಡುಗರ ಹುಬ್ಬೇರಿಸಿತು. ಈ ಕ್ಯಾಚ್​ ನೋಡಿ ಒಂದು ಕ್ಷಣ ಬೆರಗಾದ ಅಭಿಮಾನಿಗಳು, ಹರ್ಷಲ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಈ ರೋಮಾಂಚಕ ಕ್ಯಾಚ್​ನ ದೃಶ್ಯಗಳು ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹರ್ಷಲ್ ಪಟೇಲ್​ ಕರಿಯರ್​ನಲ್ಲಿ ಇದೊಂದು ಉತ್ತಮ ಕ್ಯಾಚ್​. ಈ ರೀತಿ ಹಿಂದೆಂದೂ ಅವರು ಹಿಡಿದಿರಲಿಲ್ಲ ಎಂಬ ಪ್ರಶಂಸೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).