ಲಂಡನ್: ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಇಂಗ್ಲೆಂಡ್ ವೈಟ್ಬಾಲ್ ತಂಡದ ಹೊಸ ನಾಯಕರಾಗಿ ಸೋಮವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದ ಬಳಿಕ ಜೋಸ್ ಬಟ್ಲರ್ ಟಿ20 ಮತ್ತು ಏಕದಿನ ತಂಡದ ನಾಯಕತ್ವ ತ್ಯಜಿಸಿದ್ದರು.
26 ವರ್ಷದ ಬ್ರೂಕ್ ಇದುವರೆಗೆ ಇಂಗ್ಲೆಂಡ್ ಏಕದಿನ ಮತ್ತು ಟಿ20 ತಂಡದ ಉಪನಾಯಕರಾಗಿದ್ದರು. ಅಲ್ಲದೆ ಬಟ್ಲರ್ ಗೈರಿನಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ಆಸ್ಟ್ರೆಲಿಯಾ ಎದುರು 5 ಏಕದಿನ ಪಂದ್ಯಗಳಲ್ಲಿ ಹಂಗಾಮಿ ನಾಯಕರೂ ಆಗಿದ್ದರು. ಮುಂದಿನ ಮೇ ಅಂತ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳ ಸರಣಿ ಬ್ರೂಕ್ಗೆ ಪೂರ್ಣಪ್ರಮಾಣದ ನಾಯಕರಾಗಿ ಮೊದಲ ಸವಾಲು ಆಗಿರಲಿದೆ.
"ಇದೊಂದು ದೊಡ್ಡ ಗೌರವವಾಗಿದೆ. ಬಾಲ್ಯದಿಂದಲೂ ನಾನು ಇಂಗ್ಲೆಂಡ್ ಪರ ಆಡುವುದು ಮಾತ್ರವಲ್ಲದೆ ನಾಯಕನಾಗುವ ಕನಸನ್ನೂ ಕಂಡಿದ್ದೆ. ಇದೀಗ ಆ ಅಪೂರ್ವ ಅವಕಾಶ ನನಗೆ ಎದುರಾಗಿದೆ' ಎಂದು ಹ್ಯಾರಿ ಬ್ರೂಕ್ ನಾಯಕತ್ವದ ಜವಾಬ್ದಾರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬ್ರೂಕ್ ಇದುವರೆಗೆ 44 ಟಿ20, 26 ಏಕದಿನ ಮತ್ತು 24 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಬಾರಿ ಐಪಿಎಲ್ನಲ್ಲಿ ಡೆಲ್ಲಿ ಪರ ಆಡಬೇಕಾಗಿದ್ದ ಬ್ರೂಕ್, ಕೊನೇಕ್ಷಣದಲ್ಲಿ ಹಿಂದೆ ಸರಿದಿದ್ದರು. ಇದರಿಂದಾಗಿ ಮುಂದಿನ 2 ವರ್ಷಗಳಿಗೆ ಐಪಿಎಲ್ನಿಂದ ನಿಷೇಧಕ್ಕೂ ಒಳಗಾಗಿದ್ದಾರೆ.
ಬ್ರೂಕ್ ಈ ಮುನ್ನ 19 ವಯೋಮಿತಿ ವಿಶ್ವಕಪ್ನಲ್ಲಿ ಇಂಗ್ಲೆಂಡ್ ನಾಯಕತ್ವ ವಹಿಸಿದ್ದರು. ಅಲ್ಲದೆ ಯಂಗ್ ಲಯನ್ಸ್ ತಂಡದ ನಾಯಕರೂ ಆಗಿದ್ದರು. ದಿ ಹಂಡ್ರೆಡ್ನಲ್ಲಿ ನಾರ್ಥನ್ ಸೂಪರ್ಚಾರ್ಜರ್ಸ್ ತಂಡದ ನಾಯಕತ್ವ ವಹಿಸಿದ ಅನುಭವವನ್ನೂ ಹೊಂದಿದ್ದಾರೆ.