ಕ್ರೀಡೆ

ನಮ್ಮಿಬ್ಬರ ಮಧ್ಯೆ ಏನು ನಡೆದಿದೆ ಗೊತ್ತಾ? ಡಿವೋರ್ಸ್​ ಬಗ್ಗೆ ಕೊನೆಗೂ ಮೌನ ಮುರಿದ ಹಾರ್ದಿಕ್​ ಪತ್ನಿ ನತಾಶಾ!

ನವದೆಹಲಿ: ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಮತ್ತು ಐಪಿಎಲ್​ 17ನೇ ಆವೃತ್ತಿ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮತ್ತು ಟಿ20 ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಪತ್ನಿ ನತಾಶಾ ಸ್ಟಾಂಕೋವಿಕ್​ ಜತೆಗಿನ ಭಿನ್ನಾಭಿಪ್ರಾಯದಿಂದ ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಮತ್ತು ಅವರ ಆಸ್ತಿಯ ಶೇ. 70 ರಷ್ಟನ್ನು ಜೀವನಾಂಶವಾಗಿ ನತಾಶಾ ಹೆಸರಿಗೆ ವರ್ಗಾಯಿಸಲಾಗಿದೆ ಎಂಬ ಸುದ್ದಿಗಳು ಹರಿದಾಡಿದವು. ಅಲ್ಲದೆ, ಪಾಂಡ್ಯ ಅವರು ತನ್ನೆಲ್ಲ ಆಸ್ತಿಯನ್ನು ತಾಯಿಯ ಹೆಸರಿನಲ್ಲಿ ಬರೆಸಿಟ್ಟಿದ್ದಾರೆ ಎಂಬ ಸುದ್ದಿಯು ಹರಿದಾಡಿತು. ಆದರೆ, ಹಾರ್ದಿಕ್ ಆಗಲಿ ಅಥವಾ ನತಾಶಾ ಆಗಲಿ ಡಿವೋರ್ಸ್​ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂದಹಾಗೆ ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪತಿಯ ಸಾಧನೆಯ ಬಗ್ಗೆ ನತಾಶಾ ಅವರು ಕನಿಷ್ಠ ಒಂದೇ ಒಂದು ಪೋಸ್ಟ್ ಮಾಡಲಿಲ್ಲ. ಹೀಗಾಗಿ ಡಿವೋರ್ಸ್​ ವದಂತಿಗೆ ಪುಷ್ಠಿ ಸಿಕ್ಕಿದಂತಾಯಿತು ಮತ್ತು ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ನಿಜವೆಂದು ಹಲವರು ನಂಬಿದರು. ಅಲ್ಲದೆ, ನತಾಶಾ ಅವರನ್ನು ಕ್ರೀಡಾಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದರು. ನತಾಶಾಳಂತಹ ಪತ್ನಿ ಯಾರಿಗೂ ಬೇಡ ಎಂದು ಕಿಡಿಕಾರಿದರು.

ಇದೀಗ ಇತ್ತೀಚೆಗೆ ನತಾಶಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನತಾಶಾ ವಿಚ್ಛೇದನಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಬದಲು ಪರೋಕ್ಷವಾಗಿ ತನ್ನ ಬಗ್ಗೆ ನೆಗೆಟಿವ್ ಆಗಿ​ ಮಾತನಾಡುತ್ತಿರುವವರಿಗೆ ಕೌಂಟರ್ ಕೊಟ್ಟಿದ್ದಾರೆ. ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯಗೆ ಬೆಂಬಲ ಹೆಚ್ಚುತ್ತಿದ್ದಂತೆಯೇ ಕೆಲವರು ನತಾಶಾ ಅವರ ತಪ್ಪೇ ಇರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಟ್ರೋಲ್​ ಮಾಡುತ್ತಿರುವವರಿಗೆ ತಿರುಗೇಟು ನೀಡಿರುವ ನತಾಶಾ, ಜನ ಏನನ್ನೂ ತಿಳಿಯದೆ ಯಾರನ್ನಾದರೂ ಜಡ್ಜ್ ಮಾಡುತ್ತಾರೆ. ಘಟನೆಯ ಹಿಂದೆ ಏನು ನಡೆದಿದೆ ಎಂಬುದು ನಿಜವಾಗಿಯೂ ಅವರಿಗೆ ಗೊತ್ತಿರುವುದಿಲ್ಲ. ಆದರೆ, ನೇರವಾಗಿ ನಿರ್ಣಯಿಸುವ ಮೂಲಕ, ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯ ಬಗ್ಗೆ ಯಾವುದೇ ಗಾಳಿಸುದ್ದಿ ಬಂದಾಗ ಅದು ನಿಜವೋ ಸುಳ್ಳೋ ಎಂದು ತಿಳಿಯದೆ, ಅವರ ಬಗ್ಗೆ ಸಹಾನುಭೂತಿ ತೋರಿಸದೆ ಅವರನ್ನು ಜಡ್ಜ್​ ಮಾಡಿಬಿಡುತ್ತಾರೆ. ಇಂತಹ ಸಮಯದಲ್ಲಿ ತುಂಬಾ ದುಃಖವಾಗುತ್ತದೆ ಎಂದು ನತಾಶಾ ವಿಡಿಯೋದಲ್ಲಿ ಹೇಳಿದ್ದಾರೆ.

ತನ್ನ ಮತ್ತು ಹಾರ್ದಿಕ್ ನಡುವೆ ಏನಾಯಿತು ಎಂದು ತಿಳಿಯದವರೂ ನನ್ನದೇ ತಪ್ಪು ಎನ್ನುವ ಅರ್ಥದಲ್ಲಿ ತೀರ್ಪು ನೀಡುತ್ತಿರುವುದಕ್ಕೆ ನತಾಶಾ ಪರೋಕ್ಷವಾಗಿ ಪ್ರತಿಕ್ರಿಯಿಸಿರಬಹುದು ಎಂದು ನೆಟ್ಟಿಗರು ಭಾವಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಡಿವೋರ್ಸ್​ ವಿಚಾರವಾಗಿ ಮುಂದಿನ ದಿನಗಳಲ್ಲಿ ಹಾರ್ದಿಕ್​ ಪಾಂಡ್ಯ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. (ಏಜೆನ್ಸೀಸ್​)