ನವದೆಹಲಿ: ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಸರಣಿ ಗೆಲುವುಗಳ ಮೂಲಕ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಬಲಿಷ್ಠ ತಂಡಗಳ ಮಧ್ಯೆ ಅದ್ಭುತ ಪ್ರದರ್ಶನ ನೀಡಿದ ಭಾರತ ಈ ಬಾರಿ ಖಚಿತವಾಗಿ ವಿಶ್ವಕಪ್ ಟ್ರೋಫಿ ಪಡೆಯಲಿದೆ ಎಂಬ ಭರವಸೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ಸದ್ಯ ಒಂದೆಡೆ ಈ ಖುಷಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದರೆ, ಮತ್ತೊಂದೆಡೆ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬಾಂಗ್ಲಾದೇಶದ ವಿರುದ್ಧ ಅನುಭವಿಸಿದ ಆ್ಯಂಕಲ್ ಗಾಯದಿಂದ ಇನ್ನೂ ಚೇರಿಸಿಕೊಂಡಿಲ್ಲ. ಇದು ಅವರ ಫ್ಯಾನ್ಸ್ಗೆ ತೀವ್ರ ಬೇಸರ ತಂದಿದೆ. ಸದ್ಯ ಹಾರ್ದಿಕ್ ಗಾಯಗೊಂಡಿರುವ ಹಿನ್ನೆಲೆ ಇದೀಗ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ಬೌಲಿಂಗ್ ಮಾಡುವಾಗ ಅವರು ಗಾಯಗೊಂಡಿದ್ದರು. ತಮ್ಮ ಬಲಗಾಲಿನಿಂದ ಬಾಲ್ ನಿಲ್ಲಿಸಲು ಪ್ರಯತ್ನಿಸುವಾಗ ಅವರ ಪಾದ ಟ್ವಿಸ್ಟ್ ಆಯಿತು. ಆ ಪಂದ್ಯದಲ್ಲಿ ಕೂಡಲೇ ಹಾರ್ದಿಕ್ ಹೊರ ನಡೆದರು. ತದನಂತರ ವೈದ್ಯರಿಂದ ಹೆಚ್ಚಿನ ಚಿಕಿತ್ಸೆ ಕೂಡ ಪಡೆದುಕೊಂಡರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯರನ್ನು ಇಳಿಸುವ ದೊಡ್ಡ ಷಡ್ಯಂತ್ರ ನಡೆದಿದೆ: ಬಸನಗೌಡ ಪಾಟೀಲ್ ಯತ್ನಾಳ್
ಗಾಯಗೊಂಡ ಹಾರ್ದಿಕ್ ಪಾಂಡ್ಯ ಅಂದಿನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗಿದ್ದು, ಸಂಪೂರ್ಣವಾಗಿ ಗುಣಮುಖರಾಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಹೋಗುವ ಮುನ್ನ ನವೆಂಬರ್ 2 ರಂದು ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ,(ಏಜೆನ್ಸೀಸ್).