ನವದೆಹಲಿ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸುದೀರ್ ಸಮಯದ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಪೂರ್ವಭಾವಿಯಾಗಿ ಹಾರ್ದಿಕ್ ಪಾಂಡ್ಯ ಮುಂಬರುವ ರಣಜಿ ಟ್ರೋಫಿಯಲ್ಲಿ ಬರೋಡ ತಂಡದ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ. ವರ್ಷಾಂತ್ಯದ ಮಹತ್ವದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಹಾರ್ದಿಕ್ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.
ಹಾರ್ದಿಕ್ ಪಾಂಡ್ಯ ಕಳೆದ 6 ವರ್ಷಗಳಿಂದ ಟೆಸ್ಟ್ ಪಂದ್ಯ ಆಡಿಲ್ಲ. 2018ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೌಥಾಂಪ್ಟನ್ನಲ್ಲಿ ಕೊನೇ ಟೆಸ್ಟ್ ಆಡಿದ್ದರು. ನಂತರದಲ್ಲಿ ಫಿಟ್ನೆಸ್ ಸಮಸ್ಯೆಯಿಂದಾಗಿ ಅವರು ಟೆಸ್ಟ್ ಕ್ರಿಕೆಟ್ನಿಂದ ಸಂಪೂರ್ಣವಾಗಿ ದೂರ ಉಳಿದುಕೊಂಡಿದ್ದಾರೆ.
30 ವರ್ಷದ ಹಾರ್ದಿಕ್ ಟೆಸ್ಟ್ ಕ್ರಿಕೆಟ್ಗೆ ಮರಳಿದರೆ ಭಾರತ ತಂಡ ತಂಡಕ್ಕೆ ವರ್ಷಾಂತ್ಯದ ಆಸ್ಟ್ರೆಲಿಯಾದ ಪ್ರವಾಸದ 5 ಪಂದ್ಯಗಳ ಬಾರ್ಡರ್&ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಹೆಚ್ಚಿನ ನೆರವಾಗಲಿದೆ. ಇದೇ ಕಾರಣಕ್ಕಾಗಿ ಬಿಸಿಸಿಐ, ಮುಂಬರುವ ರಣಜಿ ಟ್ರೋಫಿಯಲ್ಲಿ ಆಡುವಂತೆ ಹಾರ್ದಿಕ್ಗೆ ಸೂಚಿಸಿದೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಹಾರ್ದಿಕ್ ಈಗಾಗಲೆ ಕೆಂಪು ಚೆಂಡಿನಲ್ಲಿ ಬೌಲಿಂಗ್ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಕಳೆದ ವಾರ ಅವರು ಇಂಗ್ಲೆಂಡ್ನಲ್ಲಿ ಕೆಂಪು ಚೆಂಡಿನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಸ್ವತಃ ಹಾರ್ದಿಕ್ ಕೂಡ ಟೆಸ್ಟ್ ಕ್ರಿಕೆಟ್ಗೆ ಮರಳಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಹಾರ್ದಿಕ್ ಪಾಂಡ್ಯ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಗೂ ಭಾರತ ತಂಡದ ಭಾಗವಾದರೆ ಅಚ್ಚರಿ ಇಲ್ಲ ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯ ಇದುವರೆಗೆ ಭಾರತ ಪರ 11 ಟೆಸ್ಟ್ ಆಡಿದ್ದು, 1 ಶತಕ, 4 ಅರ್ಧಶತಕ ಸಹಿತ 532 ರನ್ ಗಳಿಸಿದ್ದಾರೆ. ಜತೆಗೆ 17 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಒಂದು 5 ವಿಕೆಟ್ ಗೊಂಚಲು ಕೂಡ ಸೇರಿದೆ.
ಟಿ20 ವಿಶ್ವಕಪ್ ನಂತರ ಶ್ರೀಲಂಕಾ ಪ್ರವಾಸದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಕೊನೆಯದಾಗಿ ಭಾರತ ಪರ ಆಡಿರುವ ಹಾರ್ದಿಕ್ ಇನ್ನು ಅಕ್ಟೋಬರ್ನಲ್ಲಿ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ನಿರೀಕ್ಷೆ ಇದೆ. ನಂತರ ಅಕ್ಟೋಬರ್ 11ರಿಂದ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಬರೋಡ ತಂಡ ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ.