ಕ್ರೀಡೆ

ನಮ್ಮಿಂದ ನೋಡಲು ಆಗ್ತಿಲ್ಲ… ನಮಗಂತೂ ತುಂಬಾ ಖುಷಿ! ಹಾರ್ದಿಕ್​ಗೆ ಇದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ

ಮುಂಬೈ: ಪ್ರಸಕ್ತ ಐಪಿಎಲ್-2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕತೆ ಮುಗಿದಿದೆ. ಈ ಸೀಸನ್​ನಲ್ಲಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು ಹಾಗೂ 8 ಸೋಲುಗಳೊಂದಿಗೆ ಪಾಂಡ್ಯ ನೇತೃತ್ವದ ಮುಂಬೈ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ನೀಡಿದ 170 ರನ್‌ಗಳ ಗುರಿಯನ್ನು ತಲುಪಲು ಮುಂಬೈ ತಂಡ ವಿಫಲವಾಯಿತು ಮತ್ತು 24 ರನ್‌ಗಳಿಂದ ಸೋತಿತು.

ಈ ಸೀಸನ್​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಮತ್ತು ಬ್ಯಾಟ್ಸ್‌ಮನ್ ಆಗಿ ದಯನೀಯವಾಗಿ ವಿಫಲರಾಗಿದ್ದಾರೆ. ಮುಂಬೈ ನಾಯಕತ್ವ ವಹಿಸಿಕೊಂಡಾಗಿನಿಂದ ಪಾಂಡ್ಯ ತೀವ್ರ ಟೀಕೆಗೆ ಗುರಿಯಾಗಿರುವುದು ಗೊತ್ತೇ ಇದೆ. ಇದೇ ಸಂದರ್ಭದಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರನ್ನು ಆ ಸ್ಥಿತಿಯಲ್ಲಿ ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ. ಆದರೆ, ಕೆಲವರು ಪಾಂಡ್ಯ ಸ್ಥಿತಿಯನ್ನು ನೋಡಿ ಖುಷಿ ಪಟ್ಟಿದ್ದಾರೆ.

ಮುಂಬೈ ಮ್ಯಾನೇಜ್​ಮೆಂಟ್​ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ಮಾಡಿತು. ಆದರೆ, ಆ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಪಾಂಡ್ಯ ದಯನೀಯವಾಗಿ ವಿಫಲರಾಗಿದ್ದಾರೆ. ತಂಡವನ್ನು ಮುನ್ನಡೆಸುವುದರೊಂದಿಗೆ ಬ್ಯಾಟ್ಸ್​ಮನ್ ಮತ್ತು ಬೌಲರ್ ಆಗಿ ಸಂಪೂರ್ಣ ವಿಫಲರಾದರು. ಇದರ ಪರಿಣಾಮ ಮುಂಬೈ ಇಂಡಿಯನ್ಸ್ ಭಾರೀ ಬೆಲೆ ತೆತ್ತಿದ್ದು, ಈ ಬಾರಿಯ ಐಪಿಎಲ್ ಸೀಸನ್‌ನಿಂದ ಹೊರಬಿದ್ದಿದೆ. ಹೀಗಾಗಿ ಪಾಂಡ್ಯ ವಿರುದ್ಧ ಟೀಕೆಗಳು ಹೆಚ್ಚಾಗಿದೆ. ಇದೆಲ್ಲವನ್ನು ಸ್ವಲ್ಪ ಬದಿಗಿಟ್ಟು, ಪಾಂಡ್ಯ ಸ್ಥಿತಿಯನ್ನು ನೋಡಿದ ಅಭಿಮಾನಿಗಳು ಅವರು ನೋವಿನಿಂದ ನರಳಿದ್ದನ್ನು ನೋಡಲು ನಮ್ಮಿಂದ ಆಗಲಿಲ್ಲ ಎಂದಿದ್ದಾರೆ.

ಈ ಪಂದ್ಯದಲ್ಲಿ ಕೆಕೆಆರ್ ಬೌಲರ್​ಗಳನ್ನು ಎದುರಿಸಲು ಸಾಧ್ಯವಾಗದೆ ಮುಂಬೈ ತಂಡದ ಆಟಗಾರರು ಅಲ್ಪ ರನ್​ಗಳಿಗೆ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ತಲುಪಿದರು. ಕೊನೆಗೆ ಹೀನಾಯವಾಗಿ ಸೋತರು. ಈ ನೋವಿನಿಂದ ಕೈಯಲ್ಲಿ ಮುಖ ಮುಚ್ಚಿಕೊಂಡಿರುವ ಪಾಂಡ್ಯ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರೊಂದಿಗೆ ಪಾಂಡ್ಯ ಅಭಿಮಾನಿಗಳು ಇದು ಹೃದಯ ವಿದ್ರಾವಕ ಕ್ಷಣ, ಇದುವರೆಗೂ ಹಾರ್ದಿಕ್ ಅವರನ್ನು ಈ ರೀತಿ ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ಪಾಂಡ್ಯ ಅವರನ್ನು ಈ ರೀತಿ ನೋಡಿ ಖುಷಿ ಪಡುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬಂದರೆ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಒಂದು ಎಸೆತ ಬಾಕಿ ಇರುವಂತೆಯೇ 169 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ 170 ರನ್‌ಗಳ ಗುರಿಯನ್ನು ಮುಟ್ಟಲು ಸಾಧ್ಯವಾಗದೆ ಮುಂಬೈ 145 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ 24 ರನ್‌ಗಳಿಂದ ಸೋಲು ಕಂಡಿತು. (ಏಜೆನ್ಸೀಸ್​)