ಕ್ರೀಡೆ

ಕೇವಲ ಒಂದೇ ಒಂದು ಫೋಟೋದಿಂದ ವಿರಾಟ್​ ಕೊಹ್ಲಿ ದಾಖಲೆ ಮುರಿದ ಹಾರ್ದಿಕ್​ ಪಾಂಡ್ಯ! Hardik Pandya

Hardik Pandya : ಇತ್ತೀಚೆಗೆಷ್ಟೇ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಕಳೆದ ಭಾನುವಾರ (ಮಾರ್ಚ್ 9) ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಮೂರನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿಯಿತು.

2017ರಲ್ಲಿಯೂ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿತ್ತು ಆದರೆ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲುಂಡಿತು. ಆ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೂಡ ತಂಡದ ಸದಸ್ಯರಾಗಿದ್ದರು. ಈಗ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಜಯಿಸಿದ ಬೆನ್ನಲ್ಲೇ ಕಪ್ ಪಡೆದ ಟೀಮ್​ ಇಂಡಿಯಾ ಮೈದಾನದಲ್ಲಿ ಸಂಭ್ರಮಿಸಿದರು. ಒಬ್ಬೊಬ್ಬರ ಸಂಭ್ರಮಾಚರಣೆಯೂ ಭಿನ್ನವಾಗಿತ್ತು ಮತ್ತು ಅದ್ಭುತವಾಗಿತ್ತು.

ಚಾಂಪಿಯನ್ಸ್ ಟ್ರೋಫಿಯೊಂದಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2024ರ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಟ್ರೋಫಿಯೊಂದಿಗೆ ಹೇಗೆ ಪೋಸ್ ನೀಡಿದ್ದರೋ, ಅದೇ ರೀತಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಹಾರ್ದಿಕ್​ ಪೋಸ್ ನೀಡಿದ್ದರು. ಆ ಪೋಸ್​ ಖ್ಯಾತ ಟಿಕ್​ಟಾಕರ್​ ಖ್ಯಾಬೆ ಲಾಮೆಯಿಂದ ಸ್ಫೂರ್ತಿ ಪಡೆದಿದೆ.

ಒಂದೇ ಒಂದು ಮಾತನಾಡದೇ ಕೇವಲ ತನ್ನ ಕೈ ಸನ್ನೆಯಿಂದಲೇ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ತೋರಿಸುವುದರಲ್ಲಿ ಖ್ಯಾಬೆ ಲಾಮೆ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಅವರ ಸಿಗ್ನೆಚರ್​ ಪೋಸ್​ ಅನ್ನೇ ಹಾರ್ದಿಕ್​ ಪಾಂಡ್ಯ ಅವರು ಕಾಪಿ ಮಾಡಿ, ಚಾಂಪಿಯನ್ಸ್​ ಟ್ರೋಫಿಯೊಂದಿಗೆ ಪೋಸ್ ನೀಡಿದರು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಎಷ್ಟರಮಟ್ಟಿಗೆ ಅಂದರೆ ವಿರಾಟ್​ ಕೊಹ್ಲಿ ದಾಖಲೆಯನ್ನೇ ಮುರಿದಿದ್ದಾರೆ.​

ಆ ಫೋಟೋಗೆ ಇನ್‌ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಲೈಕ್ಸ್​ ಬಂದಿವೆ. ಅತಿ ವೇಗವಾಗಿ ಒಂದು ಮಿಲಿಯನ್ಸ್​ ಲೈಕ್​ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಹಿಂದೆ ಆ ದಾಖಲೆಯನ್ನು ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೊಂದಿದ್ದರು.

2024ರ ಟಿ20 ವಿಶ್ವಕಪ್ ನಂತರ, ಕೊಹ್ಲಿ ಟ್ರೋಫಿಯೊಂದಿಗೆ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆಗ ಕೇವಲ ಏಳು ನಿಮಿಷಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿತು. ಈಗ, ಹಾರ್ದಿಕ್ ಅವರ ಫೋಟೋ ಕೇವಲ ಆರು ನಿಮಿಷಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಪ್ರಸ್ತುತ, ಈ ಫೋಟೋ 1.66 ಕೋಟಿಗೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. (ಏಜೆನ್ಸೀಸ್​)