ಕ್ರೀಡೆ

ನತಾಶಾಗೆ ಹಾರ್ದಿಕ್ ಪಾಂಡ್ಯ ರೋಮ್ಯಾಂಟಿಕ್ ಗಿಫ್ಟ್!

ಮುಂಬೈ: ಶೀಘ್ರದಲ್ಲೇ ಅಪ್ಪ-ಅಮ್ಮನಾಗಲಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ-ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಹಾಲಿ ಸಮಯವನ್ನು ಮತ್ತಷ್ಟು ರೋಮ್ಯಾಂಟಿಕ್ ಆಗಿ ಕಳೆಯುತ್ತಿದ್ದಾರೆ. ಗರ್ಭಿಣಿ ನತಾಶಾಗೆ ಅಚ್ಚರಿಯ ಉಡುಗೊರೆಗಳನ್ನು ನೀಡುತ್ತ ಖುಷಿ ಪಡಿಸುತ್ತಿದ್ದಾರೆ ಹಾರ್ದಿಕ್ ಪಾಂಡ್ಯ. ಬೃಹತ್ ಹೂಗುಚ್ಛವೊಂದನ್ನು ಹಾರ್ದಿಕ್‌ರಿಂದ ಪಡೆದುಕೊಂಡಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ನತಾಶಾ, ‘ನೀನು ಎಂದೆಂದಿಗೂ ನನ್ನವನು’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಪಾಂಡ್ಯ ಕೂಡ ಗುಲಾಬಿಯ ದೊಡ್ಡ ಗುಚ್ಛದ ಜತೆಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, ‘ನನ್ನ ಗುಲಾಬಿಗೆ ಈ ಗುಲಾಬಿಗಳು’ ಎಂದು ಬರೆದುಕೊಂಡಿದ್ದಾರೆ.

ಹಾರ್ದಿಕ್ ಮತ್ತು ನತಾಶಾ 2020ರ ಜನವರಿ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲಾಕ್‌ಡೌನ್ ನಡುವೆ ಇತ್ತೀಚೆಗೆ ತಾವು ಮಗುವಿನ ನಿರೀಕ್ಷೆಯಲ್ಲಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಇದರ ನಡುವೆ ಸರಳವಾಗಿ ಅವರ ವಿವಾಹವೂ ನಡೆದಿದೆ ಎನ್ನಲಾಗುತ್ತಿದೆ. 26 ವರ್ಷದ ಹಾರ್ದಿಕ್ ಪಾಂಡ್ಯ ಭಾರತ ಪರ 38 ಟಿ20, 11 ಟೆಸ್ಟ್ ಮತ್ತು 45 ಏಕದಿನ ಪಂದ್ಯಗಳನ್ನು ಆಡಿದ್ದಾರೆ.