ಕ್ರೀಡೆ

ಗುಜರಾತ್​ನಲ್ಲಿ ರಿಟೇನ್​ ಆದರೂ ಮುಂಬೈಗೆ ಮರಳುವ ಸನಿಹದಲ್ಲಿ ಹಾರ್ದಿಕ್​ ಪಾಂಡ್ಯ! ವರ್ಗಾವಣೆ ಡೀಲ್​ ಬಹುತೇಕ ಅಂತಿಮ…

ಬೆಂಗಳೂರು: ಸ್ಟಾರ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮುಂಬರುವ ಐಪಿಎಲ್​ 17ನೇ ಆವೃತ್ತಿಗೆ ಗುಜರಾತ್​ ಟೈಟಾನ್ಸ್​ ತಂಡದಲ್ಲಿ ರಿಟೇನ್​ ಆಗಿದ್ದರೂ, ಮುಂಬೈ ಇಂಡಿಯನ್ಸ್​ ತಂಡಕ್ಕೆ ಅವರು ಮರಳುವ ಸಾಧ್ಯತೆ ಇನ್ನೂ ದೂರವಾಗಿಲ್ಲ. ಡಿಸೆಂಬರ್​ 19ರಂದು ನಡೆಯಲಿರುವ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಎಲ್ಲ 10 ತಂಡಗಳು ಭಾನುವಾರ ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಆದರೆ ಆಟಗಾರರ ವರ್ಗಾವಣೆಗೆ ಡಿಸೆಂಬರ್​ 12ರವರೆಗೂ ಅವಕಾಶವಿದೆ. ಹೀಗಾಗಿ ಹಾರ್ದಿಕ್​ ಮುಂಬೈಗೆ ಮರಳುವ ಲೆಕ್ಕಾಚಾರ ಇನ್ನೂ ಚಾಲ್ತಿಯಲ್ಲಿದೆ.

ಕೆಲ ವರದಿಗಳ ಪ್ರಕಾರ, ಹಾರ್ದಿಕ್​ ಪಾಂಡ್ಯ ಮುಂಬೈಗೆ ವರ್ಗಾವಣೆಯಾಗುವುದು ಬಹುತೇಕ ಖಚಿತವೆನಿಸಿದೆ. ಆಟಗಾರರ ರಿಟೇನ್​ ಬಳಿಕ ಮುಂಬೈ ತಂಡ ಸದ್ಯ ಕೇವಲ 15.25 ಕೋಟಿ ರೂ. ಬಜೆಟ್​ ಉಳಿಸಿಕೊಂಡಿದೆ. ಹೀಗಾಗಿ, ಕಳೆದ ಹರಾಜಿನಲ್ಲಿ 17.5 ಕೋಟಿ ರೂ. ಖರೀದಿಸಿದ್ದ ಆಸೀಸ್​ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ರನ್ನು ಮುಂಬೈ ತಂಡ ಆರ್​ಸಿಬಿಗೆ ವರ್ಗಾವಣೆ ಮಾಡಲಿದೆ. ಜತೆಯಲ್ಲೇ 15 ಕೋಟಿ ರೂ. ಮೌಲ್ಯದ ಹಾರ್ದಿಕ್​ರನ್ನು ಗುಜರಾತ್​ ತಂಡದಿಂದ ಸೆಳೆದುಕೊಳ್ಳಲಿದೆ ಎನ್ನಲಾಗಿದೆ. ಇನ್ನು ಕೆಲದಿನಗಳಲ್ಲಿ ವರ್ಗಾವಣೆ ಒಪ್ಪಂದ ಅಂತಿಮಗೊಳಿಸಿ ಮುಂಬೈ&ಗುಜರಾತ್​ ತಂಡಗಳು ಅಧಿಕೃತ ಪ್ರಕಟಣೆ ಹೊರಡಿಸಲಿವೆ ಎನ್ನಲಾಗಿದೆ. ಹಾರ್ದಿಕ್​ ಈ ಮುನ್ನ 2015ರಿಂದ 2021ರವರೆಗೆ ಮುಂಬೈ ತಂಡದಲ್ಲೇ ಇದ್ದರು ಮತ್ತು 4 ಬಾರಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು.

2022ರಲ್ಲಿ ಗುಜರಾತ್​ ತಂಡದ ನಾಯಕರಾಗಿ ಆಡಿದ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿದ್ದ ಹಾರ್ದಿಕ್​, ಐಪಿಎಲ್​ನಲ್ಲಿ ವರ್ಗಾವಣೆಯಾಗುತ್ತಿರುವ 3ನೇ ನಾಯಕರೆನಿಸುವ ಸನಿಹದಲ್ಲಿದ್ದಾರೆ. ಆರ್​. ಅಶ್ವಿನ್​ (ಪಂಜಾಬ್​ನಿಂದ ಡೆಲ್ಲಿ) ಮತ್ತು ಅಜಿಂಕ್ಯ ರಹಾನೆ (ರಾಜಸ್ಥಾನದಿಂದ ಡೆಲ್ಲಿ) ಈ ಹಿಂದಿನ ಇಬ್ಬರು ನಾಯಕರು.

ಹರ್ಷಲ್​ಗೆ ಆರ್​ಸಿಬಿ ಕೊಕ್​: ಆರ್​ಸಿಬಿ ತಂಡ ಪ್ರಮುಖರಾದ ವೇಗಿ ಹರ್ಷಲ್​ ಪಟೇಲ್​, ಲಂಕಾ ಸ್ಪಿನ್ನರ್​ ವಾನಿಂದು ಹಸರಂಗ ಮತ್ತು ಆಸೀಸ್​ ವೇಗಿ ಜೋಶ್​ ಹ್ಯಾಸಲ್​ವುಡ್​ರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ. ಮುಂಬೈ ತಂಡ ಇಂಗ್ಲೆಂಡ್​ ವೇಗಿ ಜೋ್ರಾ ಆರ್ಚರ್​ರನ್ನು ಕೈಬಿಟ್ಟಿದೆ.