ಕ್ರೀಡೆ

ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ; ಬಿಸಿಸಿಐ ನಡೆಗೆ ಕಿಡಿಕಾರಿದ ಹರ್ಭಜನ್​ ಸಿಂಗ್

ನವದೆಹಲಿ: ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸುತ್ತಿದ್ದಂತೆ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತಿವಾಗುತ್ತಿದ್ದು, ಹಲವರು ನೂತನ ಕೋಚ್​ ಗಂಭೀರ್ ಹಾಗೂ ಆಯ್ಕೆ ಸಮಿತಿ ಸದಸ್ಯರ ನಡೆಗೆ ಕಿಡಿಕಾರಿದ್ದಾರೆ.

ಇತ್ತೀಚಿಗೆ ಜಿಂಬಾಬ್ವೆ ವಿರುದ್ಧ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ಅಭಿಷೇಕ್​ ಶರ್ಮಾ ಹಾಗೂ ಸಂಜು ಸ್ಯಾಮ್ಸನ್​ರನ್ನು ಆಯ್ಕೆ ಮಾಡದಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. 17ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದ ಸ್ಪಿನ್ನರ್​ ಯಜುವೇಂದ್ರ ಚಹಲ್​ರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿರುವುದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭಜ್ಜಿ, ಯಜುವೇಂದ್ರ ಚಹಲ್​, ಸಂಜು ಸ್ಯಾಮ್ಸನ್​ ಹಾಗೂ ಅಭಿಷೇಕ್​​ ಶರ್ಮಾರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಏಕೆ ಆಯ್ಕೆ ಮಾಡಿಲ್ಲ ಎಂಬುದು ನನಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಟ್ವೀಟ್​ ಮಾಡುವ ಮೂಲಕ ಬಿಸಿಸಿಐ ನಡೆಗೆ ಕಿಡಿಕಾರಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಿಂದ ಸಂಜು ಸ್ಯಾಮ್ಸನ್, ಅಭಿಷೇಕ್​​ ಅವರನ್ನು ಕೈಬಿಡಲಾಗಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅವರನ್ನು ಖಂಡಿತವಾಗಿಯೂ ಆಯ್ಕೆ ಮಾಡಲಾಗುತ್ತದೆ ಎಂದು ಮಾತು ಕ್ರೀಡಾ ವಲಯದಲ್ಲಿ ಕೇಳಿ ಬರುತ್ತಿದೆ. ರೋಹಿತ್​ ಶರ್ಮ ಹಾಗೂ ವಿರಾಟ್​ ಕೊಹ್ಲಿ ನಿವೃತ್ತಿಗೊಂಡಿರುವ ಕಾರಣ ಸಂಜು ಹಾಗೂ ಅಭಿಷೇಕ್​ರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ. ಇದಲ್ಲದೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸ್ಪಿನ್ನರ್​ ಯಜುವೇಂದ್ರ ಚಹಲ್​ಗೂ ಅವಕಾಶ ಸಿಗುವ ನಿರೀಕ್ಷೆ ಇದೆ.