ಐಪಿಎಲ್ ಹೊತ್ತಿನಲ್ಲಿ ಚೈನ್ನೈ ಸೂಪರ್ಕಿಂಗ್ಸ್ ತಂಡದಲ್ಲಿ ಆಟ ಆಡುವಾಗ, ಸೋಷಿಯಲ್ ಮೀಡಿಯಾಗಳಲ್ಲಿ ತಮಿಳು ಲಿಪಿಯಲ್ಲಿ ಟ್ವಿಟ್ ಮಾಡಿ ಸಿಎಸ್ಕೆ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಕಾಲಿವುಡ್ನಲ್ಲಿ ಸಿನಿಮಾ ಮಾಡುವುದಾಗಿಯೂ ಹೇಳಿದ್ದರು. ಬಳಿಕ ಸಿನಿಮಾ ಒಪ್ಪಿಕೊಂಡು ನಟನೆಯನ್ನೂ ಒಂದು ಕೈ ನೋಡಿಯೇ ಬಿಟ್ಟರು. ಇದೀಗ ಅದೇ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿಕೊಂಡಿದ್ದಾರೆ ಹರ್ಭಜನ್.
ಹೌದು, ಜಾನ್ ಪೌಲ್ ರಾಜ್ ಮತ್ತು ಶ್ಯಾಂ ಸೂರ್ಯ ನಿರ್ದೇಶನದಲ್ಲಿ ‘ಫ್ರೆಂಡ್ಶಿಪ್’ ಶೀರ್ಷಿಕೆಯಲ್ಲಿ ಸಿನಿಮಾ ಸಿದ್ಧವಾಗಿದೆ. ಹರ್ಭಜನ್ ಜತೆಗೆ ಅರ್ಜುನ್ ಸರ್ಜಾ ಸಹ ಮುಖ್ಯಭೂಮಿಕೆಯಲ್ಲಿದ್ದಾರೆ. ಕಾಲೇಜು ಕ್ಯಾಂಪಸ್ನಲ್ಲಿ ನಡೆಯುವ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದ್ದು, ಹರ್ಭಜನ್ ಎಂದಿನ ಟರ್ಬನ್ ಲುಕ್ನಲ್ಲಿಯೇ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬಿಗ್ಬಾಸ್ ಖ್ಯಾತಿಯ ಲೋಸಲಿಯಾ ಜೋಡಿ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ‘ಫ್ರೆಂಡ್ಶಿಪ್’ ಸಿನಿಮಾ ತೆರೆಕಂಡಿರಬೇಕಿತ್ತು. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಆಗಸ್ಟ್ ವೇಳೆಗೆ ಬಿಡುಗಡೆಗೆ ಪ್ಲ್ಯಾನ್ ಮಾಡಿದೆ. ಇನ್ನು ಈ ಸಿನಿಮಾದ ಜತೆಯಲ್ಲಿ ಸಂತಾನಮ್ ನಾಯಕನಾಗಿ ನಟಿಸಲಿರುವ ‘ದಿಕ್ಕಿಲೋನಾ’ ಚಿತ್ರದಲ್ಲಿಯೂ ಬಜ್ಜಿ ನಟಿಸಲಿದ್ದಾರೆ. (ಏಜೆನ್ಸೀಸ್)