ಕ್ರೀಡೆ

ವಯಸ್ಸು 43, ಧೋನಿ ಫಿಟ್ನೆಸ್​ 100; 'ಕ್ಯಾಪ್ಟನ್ ಕೂಲ್' ರಹಸ್ಯ ಬಿಚ್ಚಿಟ್ಟ ಹರ್ಭಜನ್ ಸಿಂಗ್​ | IPL 2025

IPL 2025: ಇದೇ ಮಾ.22ರಂದು ಐಪಿಎಲ್​ 18ನೇ ಆವೃತ್ತಿ ಪ್ರಾರಂಭವಾಗಲಿದ್ದು, 10 ಬಲಿಷ್ಠ ತಂಡಗಳ ಪೈಪೋಟಿಗೆ ಕ್ರಿಕೆಟ್​ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಐಪಿಎಲ್​ನ ಮೊದಲ ಶುಭಾರಂಭ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಕೋಲ್ಕತ ನೈಟ್​ ರೈಡರ್ಸ್​ ತಂಡಗಳು ಮುಖಾಮುಖಿಯಾಗಿ ಸೆಣಸಲಿದೆ.

ಚಾಂಪಿಯನ್ಸ್​ ಟ್ರೋಫಿ ಮುಕ್ತಾಯಗೊಂಡ ಬೆನ್ನಲ್ಲೇ ಎಲ್ಲರ ಚಿತ್ತ ಇದೀಗ ಐಪಿಎಲ್​ನತ್ತ ಮುಖಮಾಡಿದೆ. 10 ತಂಡಗಳ ಪೈಕಿ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಅಭಿಮಾನಿಗಳ ಸಂಭ್ರಮ ಸಿಕ್ಕಾಪಟ್ಟೆ ಜೋರಾಗಿದೆ. ಇದಕ್ಕೆ ಕಾರಣ, ಸಿಎಸ್​ಕೆಯನ್ನು ಐದು ಬಾರಿ ಚಾಂಪಿಯನ್ಸ್​ ಪಟ್ಟಕ್ಕೇರಿಸಿದ ಹಿರಿಮೆ ಮಹೇಂದ್ರ ಸಿಂಗ್ ಧೋನಿ ಅವರ ಕಮ್​ಬ್ಯಾಕ್​. ಮತ್ತೊಂದು ಸೀಸನ್​ ಆಡಲು ಕ್ಯಾಪ್ಟನ್​ ಕೂಲ್ ಗ್ರೀನ್​ ಸಿಗ್ನಲ್​ ಕೊಟ್ಟಿದ್ದೇ ತಡ ಅಭಿಮಾನಿಗಳಲ್ಲಿ ಪಂದ್ಯ ಶುರುವಿಗೂ ಮುನ್ನವೇ ಸಂಭ್ರಮ ಮುಗಿಲು ಮುಟ್ಟಿದೆ.

ತಮ್ಮ ನೆಚ್ಚಿನ ದಿಗ್ಗಜನನ್ನು ಮತ್ತೊಮ್ಮೆ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳು, ಧೋನಿ ಅವರ ಬ್ಯಾಟಿಂಗ್ ಅಬ್ಬರ ಮತ್ತು ವಿಕೆಟ್ ಕೀಪಿಂಗ್ ನೋಡಲು ತುದಿಗಾಲಿನಲ್ಲಿದ್ದಾರೆ. ಇನ್ನು ತಮ್ಮ 43ನೇ ವಯಸ್ಸಿನಲ್ಲೂ ಐಪಿಎಲ್​ ಅಖಾಡಕ್ಕಿಳಿಯಲಿರುವ ಧೋನಿ ಫಿಟ್ನೆಸ್​ ಯುವ ಆಟಗಾರರೇ ನಾಚುವಂತಿದೆ. ವಿಶ್ವಕಪ್​ ಟ್ರೋಫಿ ಗೆಲ್ಲಿಸಿಕೊಟ್ಟ ಭಾರತದ ಮಾಜಿ ನಾಯಕನ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡ ಹರ್ಭಜನ್​ ಸಿಂಗ್​, ಧೋನಿ ಜತೆಗಿನ ಒಂದು ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ.

"ನಾನು ಇತ್ತೀಚೆಗಷ್ಟೇ ನಮ್ಮ ಸ್ನೇಹಿತನ ಮದುವೆಯಲ್ಲಿ ಧೋನಿಯನ್ನು ಭೇಟಿಯಾಗಿ ಮಾತನಾಡಿಸಿದೆ. ಈಗಲೂ ಸಹ ಅವರು ತುಂಬಾ ಫಿಟ್ ಆಗಿ ಕಾಣುತ್ತಾರೆ. ಫಿಟ್ನೆಸ್​ ವಿಷಯದಲ್ಲಿ ಧೋನಿ ಮಾಡುತ್ತಿರುವುದು ಬಹಳ ಕಷ್ಟವೇ. ಇದಕ್ಕೆ ಸಂಬಂಧಿಸಿದಂತೆ ಅವರನ್ನೇ ಪ್ರಶ್ನಿಸಿದೆ. ಹೇಗೆ ಈ ವಯಸ್ಸಿನಲ್ಲೂ ಆಡುತ್ತಿದ್ದೀರಿ? ಎಂದು. ಅದಕ್ಕೆ ಉತ್ತರಿಸಿದ ಮಾಹಿ, ಇದು ಕಠಿಣ, ಆದರೆ ಕ್ರಿಕೆಟ್ ನನಗೆ ಇಷ್ಟವಾದ ಕ್ರೀಡೆ. ಮೈದಾನದಲ್ಲಿ ಅಭಿಮಾನಿಗಳ ಮುಂದೆ ಆಡುವುದು ನನಗಿಷ್ಟ ಎಂದು ಲವಲವಿಕೆಯಿಂದಲೇ ಹೇಳಿದರು. ಕ್ರಿಕೆಟ್​ಗಾಗಿ ಧೋನಿ ಅವರ ಸಮರ್ಪಣೆ, ಪರಿಶ್ರಮ, ಬದ್ದತೆ ನಿಜಕ್ಕೂ ಶ್ಲಾಘನೀಯ" ಎಂದು ಬಜ್ಜಿ ಹೇಳಿದರು,(ಏಜೆನ್ಸೀಸ್).