ಕ್ರೀಡೆ

ಹರ್ಭಜನ್​​, ರೈನಾ ಸಂಭ್ರಮದಿಂದ ಮತ್ತೊಬ್ಬರಿಗೆ ನೋವು! ಮಾಜಿ ಕ್ರಿಕೆಟಿಗರ ವರ್ತನೆ ಖಂಡಿಸಿದ ಮಾನ್ಸಿ ಜೋಶಿ

ನವದೆಹಲಿ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಟ್ರೋಫಿಯನ್ನು ಗೆದ್ದು ಬೀಗಿದೆ. ಶನಿವಾರ (ಜುಲೈ 12) ರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡಿದರು. ಟ್ರೋಫಿ ಗೆಲ್ಲುತ್ತಿದ್ದಂತೆ ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ವಿಭಿನ್ನ ರೀತಿಯಲ್ಲಿ ಕುಣಿದು ಕುಪ್ಪಳಿಸಿದರು. ಇದನ್ನು ನೋಡಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಂಡು ನಕ್ಕರೇ, ಕೆಲವರು ಇದಕ್ಕೆ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದರು.

ತಮ್ಮ ಎದುರಾಳಿಯಾಗಿದ್ದ ಪಾಕಿಸ್ತಾನ ತಂಡವನ್ನು ಮಣಿಸಿದ್ದಕ್ಕೆ ಈ ರೀತಿ ಸಂಭ್ರಮಿಸಲಾಗಿದೆ ಎಂದು ಒಂದಷ್ಟು ವಿಡಿಯೋ ಹೇಳಿದರೆ, ಕೆಲವರು ಈ ಡ್ಯಾನ್ಸ್​ ವಿಶೇಷ ಚೇತನರನ್ನು ಅವಮಾನಿಸದಂತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಗಮನಿಸಿದ ಪ್ಯಾರಾ ಬ್ಯಾಡ್ಮಿಂಟನ್ ಸ್ಟಾರ್​ ಮಾನ್ಸಿ ಜೋಶಿ, ಯುವಿ, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಈ ಡ್ಯಾನ್ಸ್​ನಿಂದ ವಿಕಲಾಂಗರನ್ನು ಅವಮಾನಿಸಲಾಗಿದೆ ಎಂದು ಮಾಜಿ ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯ ಆಟಗಾರರು ಎಂದಮೇಲೆ ಅವರಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ನಿಮ್ಮಿಂದ ಹೆಚ್ಚಿನ ಜವಾಬ್ದಾರಿ ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಂಡ ಮಾನ್ಸಿ, "ಇದು ತಮಾಷೆ ವಿಷಯ ಅಲ್ಲವೇ ಅಲ್ಲ. ನಿಮ್ಮಿಂದ ಹೆಚ್ಚಿನ ಜವಾಬ್ದಾರಿ ನಿರೀಕ್ಷಿಸುತ್ತೇವೆ. ಈ ರೀತಿಯ ಡ್ಯಾನ್ಸ್​ಗಳು ವಿಕಲಾಂಗರನ್ನು ಅಣಕಿಸಿದೆ, ಅವಮಾನಿಸದಂತಿದೆ. ನಿಮ್ಮ ಈ ವರ್ತನೆ ಎಷ್ಟು ಜನರ ಮನಸ್ಸಿಗೆ ಘಾಸಿಯಾಗಿದೆ ಎಂಬುದರ ಬಗ್ಗೆ ನಿಮಗೆ ಅರಿವಿಲ್ಲ. ನೀವು ಮಾಡಿರುವ ರೀಲ್ಸ್ ವಿಡಿಯೋ ದೊಡ್ಡವರಿಗೆ ತಮಾಷೆ ಅನಿಸಬಹುದು. ಆದ್ರೆ, ಅಂಗವೈಕಲ್ಯ ಹೊಂದಿರುವ ಚಿಕ್ಕ ಮಕ್ಕಳಿಗೆ ಬಹಳ ತೊಂದರೆಯಾಗುತ್ತದೆ. ಈ ರೀಲ್ಸ್​ ವಿಡಿಯೋ ಇಟ್ಟುಕೊಂಡು ಅವರನ್ನು ಟೀಕಿಸುವ ಪ್ರಯತ್ನಗಳು ಹೆಚ್ಚುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ವಿಡಿಯೋ ಅಪ್ಲೋಡ್​ ಮಾಡಲು ಪಿಆರ್​ಓ ಹೇಗೆ ಅನುಮತಿ ಕೊಟ್ಟರು ಎಂಬುದೇ ನನಗೆ ತಿಳಿಯುತ್ತಿಲ್ಲ. ನಿಮ್ಮ ಈ ನಡೆಯಿಂದ ನನಗೆ ಭಾರೀ ಬೇಸರ ಉಂಟಾಗಿದೆ" ಎಂದು ಮಾನ್ಸಿ ಹೇಳಿದ್ದಾರೆ.

ಸದ್ಯ ಮಾನ್ಸಿ ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದು, ದೊಡ್ಡವರಿಗೆ ಇದರಿಂದ ಅಷ್ಟು ತೊಂದರೆ ಅನಿಸದೆ ಇರಬಹುದು. ಆದರೆ ವಿಕಲಾಂಗ ಸಮಸ್ಯೆ ಎದುರಿಸುತ್ತಿರುವ ಪುಟ್ಟ ಮಕ್ಕಳಿಗೆ ಸಾಕಷ್ಟು ಟೀಕೆ, ವ್ಯಂಗ್ಯಗಳು ಕಾಡುತ್ತವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).