ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆನಿಸಿದ ಕರ್ನಾಟಕದ ಮಾಜಿ ಬೌಲರ್ ಜಾವಗಲ್ ಶ್ರೀನಾಥ್ ಅವರಿಗೆ ಸೋಮವಾರ 51ನೇ ಜನ್ಮದಿನದ ಸಂಭ್ರಮ. ಕಪಿಲ್ ದೇವ್ ನಿವೃತ್ತಿಯ ನಂತರದಲ್ಲಿ ಭಾರತೀಯ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶ್ರೀನಾಥ್ 2003ರ ವಿಶ್ವಕಪ್ ನಂತರ ವಿದಾಯ ಹೇಳಿದ್ದರು. ಈಗ ಅವರು ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತ ತಂಡ ಗೆಲುವಿಗಾಗಿ ಸ್ಪಿನ್ನರ್ಗಳನ್ನೇ ನೆಚ್ಚಿಕೊಂಡಿದ್ದ ಕಾಲದಲ್ಲಿ ಶ್ರೀನಾಥ್, ವೇಗದ ಬೌಲರ್ಗಳು ಕೂಡ ಮ್ಯಾಚ್ ವಿನ್ನರ್ಗಳಾಗಬಲ್ಲರು ಎಂದು ನಿರೂಪಿಸಿದ್ದರು. ಆದರೆ ಅವರ ಸಿಗಬೇಕಾದ ಅರ್ಹ ಗೌರವದ ಕೊರತೆ ಈಗಲೂ ಕಾಡುತ್ತಿದೆ. ಪದ್ಮಶ್ರೀ ಸಹಿತ ಅರ್ಹ ಪ್ರಶಸ್ತಿಗಳು ಅವರಿಗೆ ಒಲಿದು ಬಂದಿಲ್ಲ ಎಂಬ ದೂರುಗಳು ಅಭಿಮಾನಿಗಳಿಂದ ಕೇಳಿಬರುತ್ತಲೇ ಇದೆ. ಶ್ರೀನಾಥ್ಗೆ ಸಿಗಬೇಕಾದ ಅರ್ಹ ಶ್ರೇಯ ಅವರಿಗೆ ಸಿಗಲಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಶಾನ್ ಪೊಲ್ಲಾಕ್ ಕೂಡ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.
1969ರ ಆಗಸ್ಟ್ 31ರಂದು ಹಾಸನದ ಜಾವಗಲ್ನಲ್ಲಿ ಜನಿಸಿದ ಶ್ರೀನಾಥ್, ಮೈಸೂರಿನಲ್ಲಿ ಶಾಲಾ-ಕಾಲೇಜು ದಿನಗಳಲ್ಲಿ ಕ್ರಿಕೆಟ್ನತ್ತ ಆಕರ್ಷಿತರಾಗಿದ್ದರು. 1991ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ ಶ್ರೀನಾಥ್, 67 ಟೆಸ್ಟ್ ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 10 ಬಾರಿ 5 ವಿಕೆಟ್ ಗೊಂಚಲುಗಳ ಸಹಿತ 236 ವಿಕೆಟ್ ಕಬಳಿಸಿದ್ದರೆ, ಏಕದಿನದಲ್ಲಿ 3 ಬಾರಿ 5 ವಿಕೆಟ್ ಗೊಂಚಲುಗಳ ಸಹಿತ 315 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 86 ರನ್ಗೆ 8 ವಿಕೆಟ್ ಮತ್ತು ಏಕದಿನದಲ್ಲಿ 23 ರನ್ಗೆ 5 ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ನಿರ್ವಹಣೆಯಾಗಿದೆ. ಬ್ಯಾಟಿಂಗ್ನಲ್ಲೂ ಉಪಯುಕ್ತರಾಗಿದ್ದ ಶ್ರೀನಾಥ್, ಟೆಸ್ಟ್ನಲ್ಲಿ 1,009 ಮತ್ತು ಏಕದಿನದಲ್ಲಿ 883 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 300ಕ್ಕೂ ಅಧಿಕ ವಿಕೆಟ್ ಕಬಳಿಸಿದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿದೆ.
1992, 1996, 1999 ಮತ್ತು 2003ರ ಏಕದಿನ ವಿಶ್ವಕಪ್ಗಳಲ್ಲಿ ಆಡಿದ್ದ ಶ್ರೀನಾಥ್, ಜಹೀರ್ ಖಾನ್ ಜತೆಗೆ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಭಾರತೀಯ ವೇಗಿ ಎಂಬ ಹೆಗ್ಗಳಿಕೆ ಹಂಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ)ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.